ಕಾರು ಅಪಘಾತ: “ಕನ್ನಡತಿ” ನಟನಿಗೆ ಗಂಭೀರ ಪೆಟ್ಟು!
ಬೆಂಗಳೂರು:- ಕನ್ನಡತಿ ಸೀರಿಯಲ್ ನಿಂದ ಜನಮನ್ನಣೆ ಗಳಿಸಿದ್ದ ನಟ ಕಿರಣ್ ರಾಜ್ ಕಾರು ಅಪಘಾತಕ್ಕೆ ಒಳಗಾಗಿದೆ. ಘಟನೆಯಲ್ಲಿ ನಟ ಕಿರಣ್ ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಬೆಂಗಳೂರಿನ ಕೆಂಗೇರಿ ಬಳಿ ಕಾರಿಗೆ ಅಡ್ಡವಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ ಕಾರು ಡಿವೈಡರ್‌ಗೆ ಗುದ್ದ ಈ ಅಪಘಾತ ಸಂಭವಿಸಿದೆ ಎಂದ ವರದಿಯಾಗಿದೆ. ಅಪಘಾತದ ಬಳಿಕ ಕಿರಣ್ ರಾಜ್ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು.
ಕಾರಿನಲ್ಲಿ ‘ರಾನಿ’ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಪ್ರಯಾಣಿಸುತ್ತಿದ್ದರು. ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ ಗುಟ್ಟಯ್ಯನ ಪಾಳ್ಯ ಬಳಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಊಟ ನೀಡಲು ಹೋಗುವ ಸಮಯದಲ್ಲಿ ಕಾರು ಅಪಘಾತವಾಗಿದೆ. ಮರ್ಸಿಡಿಸ್ ಬೆನ್ಜ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಿರಣ್ ರಾಜ್‌ಗೆ ಪ್ರತಿವಾರ ನಿರಾಶ್ರಿತರ ಕೇಂದ್ರಕ್ಕೆ ಊಟ ಕೊಡುವ ಅಭ್ಯಾಸವಿತ್ತು. ಅದೇ ರೀತಿ ಈ ಬಾರಿ ಹೋಗುವಾಗ ಈ ದುರ್ಘಟನೆ ನಡೆದಿದೆ. ಹಿಂದಿ ಧಾರಾವಾಹಿಗಳಲ್ಲಿ ಮೊದಲಿಗೆ ನಟಿಸಿದ ಕಿರಣ್ ರಾಜ್ ಬಳಿಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ‘ಕನ್ನಡತಿ’ ಧಾರಾವಾಹಿಯ ಹರ್ಷ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು.
ತೀವ್ರ ನಿಗಾ ಘಟಕದಲ್ಲಿ ಕಿರಣ್ ರಾಜ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.