ಮೆಟ್ರೋ ಪ್ರಯಾಣಿಕರೇ ಇಲ್ಲಿ ಕೇಳಿ: ಇಂದು ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ವ್ಯತ್ಯಯ!
ಬೆಂಗಳೂರು:- ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅವಾಂತರಗಳು ಒಂದೆರಡಲ್ಲ. ರಸ್ತೆ ತುಂಬೆಲ್ಲಾ ನೀರು, ಸಾಕಷ್ಟು ಕಡೆ ಉರುಳಿ ಬಿದ್ದ ಮರಗಳು, ಇನ್ನೂ ಸಾಕಷ್ಟು ಸಮಸ್ಯೆಗಳು ಉಂಟಾಗಿದೆ
ಅದರಂತೆ ಮೆಟ್ರೋ ಹಳಿ ಮೇಲೆ ಮರ ಬಿದ್ದ ಕಾರಣ ಬೆಳ್ಳಂಬೆಳಗ್ಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅಡಚಣೆಯಾಯಿತು. ಬೆಳಿಗ್ಗೆ 6.15 ರ ಸುಮಾರಿಗೆ ನೇರಳೆ ಮಾರ್ಗದ ಎಸ್‌ವಿ ರಸ್ತೆ ಮತ್ತು ಇಂದಿರಾನಗರ ನಡುವೆ ಹಳಿಯ ಮೇಲೆ ಒಂದು ಮರ ಬಿದ್ದಿದೆ.
ಪರಿಣಾಮವಾಗಿ ಮೆಟ್ರೋ ಸಂಚಾರಕ್ಕೆ ತಾತ್ಕಾಲಿಕವಾಗಿ ಅಡ್ಡಿಯಾಯಿತು. ನಂತರ ಬಿಎಂಆರ್ಸಿಎಲ್ ಅಧಿಕಾರಿಗಳು, ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಮಾಡಿ ಮೆಟ್ರೋ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಡಚಣೆಯ ಸಂದರ್ಭದಲ್ಲಿ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್, ಎಂ ಜಿ ರಸ್ತೆ ಟು ಚಲ್ಲಘಟ್ಟ ನಡುವೆ ಮಾತ್ರ ರೈಲುಗಳು ಸಂಚಾರ ಮಾಡಿದ್ದವು.
ನೇರಳೆ ಮಾರ್ಗದಲ್ಲಿ ಬೆಳಗ್ಗೆ 8.05 ರಿಂದ ಎಂದಿನಂತೆ ರೈಲುಗಳು ಓಡಾಡುತ್ತಿವೆ ಎಂದು ಬಿಎಂಆರ್ಸಿಎಲ್ ಎಕ್ಸ್ ಸಂದೇಶದ ಮೂಲಕ ತಿಳಿಸಿದೆ.