ಸಿಬ್ಬಂದಿಗಳ ನಿರ್ಲಕ್ಷ್ಯ: ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ದುರ್ಮರಣ!
ಬೆಂಗಳೂರು:- ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ದುರ್ಮರಣ ಹೊಂದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದಲ್ಲಿ ಅವಘಡ ಸಂಭವಿಸಿದ್ದು, ಮೃತ ಬಾಲಕನನ್ನು 5 ವರ್ಷದ ಸುಹಾಸ್ ಗೌಡ ಎಂದು ಗುರುತಿಸಲಾಗಿದೆ.
ಕನ್ನಮಂಗಲದ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ ನಡೆಸಲಾಗುತ್ತಿತ್ತು. ಈ ಹಿನ್ನೆಲೆ ಕಟ್ಟಡದಲ್ಲಿ ಲಿಫ್ಟ್‌ಗೆಂದು 5 ಅಡಿ ಗುಂಡಿ ತೋಡಲಾಗಿತ್ತು. ಭಾರೀ ಮಳೆಯ ಪರಿಣಾಮ ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರೂ ಸಿಬ್ಬಂದಿ ಯಾವುದೇ ಮುನ್ನೆಚ್ಚರಿಕೆ ವಹಿಸಿರಲಿಲ್ಲ.
ಸುಹಾಸ್ ಮನೆ ಮುಂಭಾಗ ಆಟವಾಡುವ ವೇಳೆ ಆಯತಪ್ಪಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಪ್ರಕರಣದ ಕುರಿತು ಮಿಲ್ಕ್ ಡೈರಿ ಅಧ್ಯಕ್ಷನ ಮೇಲೆ ಎಫ್‌ಐಆರ್ ದಾಖಲಾಗಿದೆ.