ಮುಡಾ ಹಗರಣ ಪ್ರಕರಣ: ಸಿಎಂ ಕುಟುಂಬದ ವಿರುದ್ಧ ಮತ್ತೊಂದು ಕೇಸ್
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಬೆಳವಣಿಗೆಯ ಮುನ್ಸೂಚನೆ ದೊರೆತಿದೆ. ಇದೀಗ ದೇವರಾಜು ಅವರ ಅಣ್ಣನಾದ ಮೈಲಾರಯ್ಯ ಅವರ ಮಗಳು ಜಮುನಾ, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎನ್.ಪಾರ್ವತಿ ಅವರ ವಿರುದ್ಧವೂ ದಾವೆ ಹೂಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಜಮೀನು ಎಂದು ಹೇಳುವ ಸಂಬಂಧ ದಾವೆ ಹೂಡಲಾಗಿದೆ. ಕೆಸರೆ ಗ್ರಾಮದ ಸರ್ವೆ ನಂಬರ್ 464ರ ಜಮೀನಿನಲ್ಲಿ ಭಾಗ ಬರಬೇಕು ಎಂದು ಜಮುನಾ ದಾವೆಯಲ್ಲಿ ತಿಳಿಸಿದ್ದಾರೆ. ಸರ್ವೆ ನಂ.464ರ 3.16 ಎಕರೆ ಭೂಮಿ ಪಿತ್ರಾರ್ಜಿತ ಆಸ್ತಿಯಾಗಿದ್ದು, ನನಗೂ ಪಾಲು ಕೊಡಿ ಎಂದು ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಫೈಲ್ ಮಾಡಿದ್ದಾರೆ.
ಇನ್ನೂ ಜಮುನಾ ಸಹೋದರ ಮಂಜುನಾಥಸ್ವಾಮಿ ಮಾತನಾಡಿ, ನಮ್ಮ ಚಿಕ್ಕಪ್ಪ ದೇವರಾಜು ಮೋಸದಿಂದ ಜಮೀನು ಮಾರಾಟ ಮಾಡಿದ್ದಾರೆ. ಜಮೀನು ಮೊದಲು ನನ್ನ ತಂದೆ ಮೈಲಾರಯ್ಯ ಅವರ ಹೆಸರಿನಲ್ಲಿ ಇತ್ತು. ನಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ನಮ್ಮ ಚಿಕ್ಕಪ್ಪ ದೇವರಾಜು ನನ್ನ ಹಾಗೂ ತಾಯಿ ಬಳಿ ಸಹಿ ಪಡೆದುಕೊಂಡರು. ನನ್ನ ರೀತಿ ನನ್ನ ಸಹೋದರಿ ಜಮುನಾಗು ಅನ್ಯಾಯವಾಗಿದೆ ಎಂದು ಹೇಳಿದರು.