ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ! ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆ
ಬೆಂಗಳೂರು: ತಮಿಳುನಾಡು ಕರಾವಳಿಯಿಂದ ಫೆಂಗಾಲ್ ಚಂಡಮಾರುತ ಅರಬ್ಬೀ ಸಮುದ್ರಕ್ಕೆ ಬಂದಿದ್ದು, ಕರ್ನಾಟಕದ ಕರಾವಳಿಯಲ್ಲಿ ಮುಂಜಾನೆಯಿಂದಲೇ ಭಾರೀ ಮಳೆಯಾಗುತ್ತಿದೆ. ಇನ್ನೂ ಬೆಂಗಳೂರಿನಲ್ಲೂ ಸಹ ಮುಂಜಾನೆಯಿಂದ ಸಲ್ಪಮಟ್ಟಿಗೆ ಬಿಸಿಲು ಬಂದು ಇದೀಗ ಜೋರು ಮಳೆ ಶುರುವಾಗಿದೆ.
ಬೆಂಗಳೂರಿನಲ್ಲಿ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇಂದು ಬೆಳಿಗ್ಗೆ ಸ್ವಲ್ಪ ವಿರಾಮ ಪಡೆದಿತ್ತು. ಇದೀಗ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಮತ್ತದೇ ಅವಾಂತರಗಳು ಸೃಷ್ಟಿಯಾಗಿವೆ.
ಈಗಾಗಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಆಗಲಿದೆ ಎಂಬ ಮುನ್ಸೂಚನೆ ಇದೆ. ಇನ್ನು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ,
ಉತ್ತರಕನ್ನಡ, ತುಮಕೂರು, ಹಾವೇರಿ ಜಿಲ್ಲೆಗಳ ಮೇಲೂ ನಿಗಾ ಇಡುವಂತೆ ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ, ಫೆಂಗಲ್‌ನಿಂದ ಹೆಚ್ಚು ಮಳೆಯಾಗಬಹುದು ಎಂಬ ಮುನ್ಸೂಚನೆ ಇರುವ 10 ಜಿಲ್ಲೆಗಳ ಜಿಲ್ಲಾಡಳಿತಗಳು ಮುಂಜಾಗ್ರತಾ ಕ್ರಮವಾಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.