ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಧಾನಸೌಧ ದ ಮುಂಭಾಗ ಇರುವ ಸಂವಿಧಾನಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾ ಸಾಹೇಬ್ ಡಾ ll ಬಿ ಆರ್ ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.
ಬಹಳ ಜನ ಸಂವಿಧಾನವನ್ನು ವಿರೋಧಿಸುತ್ತಾರೆ.ಭಾರತ ಬಹುಸಂಸ್ಕೃತಿಯ, ಬಹುತ್ವದ ದೇಶ. ಅನೇಕ ಜಾತಿ, ಧರ್ಮಗಳಿವೆ. ಅನೇಕ ಭಾಷೆಗಳೂ ಇವೆ. ಇದಕ್ಕೆ ಯೋಗ್ಯವಾದ ಸಂವಿಧಾನವನ್ನು ಕೊಟ್ಟವರು ಅಂಬೇಡ್ಕರ್. ಎಲ್ಲಾ ಧರ್ಮಗಳೂ, ಜಾರಿಗಳೂ ಸಮಾನವಾದುದು. ಮಾನವ ಧರ್ಮಕ್ಕೆ ಒತ್ತು ನೀಡಿದ್ದರು. ಮೂಲಭೂತವಾಗಿ ನಾವೆಲ್ಲಾ ಮನುಷ್ಯರು. ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು. ಇದನ್ನು ಅಂಬೇಡ್ಕರ್ ಅವರು ತಮ್ಮ ಬದುಕಿನಲ್ಲಿ ಸಾರಿದ್ದರು.
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದ ನಾನು ಹಿಂದೂ ಆಗಿ ಹುಟ್ಟಿದ್ದು, ಹಿಂದೂ ಆಗಿ ಸಾಯುವುದಿಲ್ಲ ಎಂದು ತಮ್ಮ ಕಡೇ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು. ಸ್ವೀಕಾರ ಮಾಡಿದ ನಂತರ ಬಹಳ ದಿನಗಳ ಕಾಲ ಉಳಿಯಲಿಲ್ಲ . ಅವರು ಕೊಟ್ಟ ಸಂವಿಧಾನದ ಪ್ರಕಾರ ಮತ್ತು ಅವರ ಹೋರಾಟದ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಅವರಿಗೆ ನಾವು ಸಲ್ಲಿಸುವ ಗೌರವ ಎಂದರು. ಅದೇ ರೀತಿಯಲ್ಲಿ ಸಂವಿಧಾನ , ಪ್ರಜಾಪ್ರಭುತ್ವ, ಸಮಾನತೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದರು.