MUDA ಹಗರಣ: ಸಿಬಿಐ ತನಿಖೆ ನಡೆಸಿ ಎಂದು ಪ್ರಧಾನಿ ಮೋದಿಗೆ ದೂರು
ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಾಗಿನಿಂದ ಮುಡಾ ಹಗರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಮುಡಾ ಹಗರಣ ವಿಚಾರವಾಗಿ ಎಸ್‌ಐಟಿ, ಲೋಕಾಯುಕ್ತ ಹಾಗೂ ಇಡಿ ಅಧಿಕಾರಿಗಳು ಬೆಂಬಿಡದೇ ತನಿಖೆ ನಡೆಸುತ್ತಿದ್ದಾರೆ. ತನಿಖೆ ಆರಂಭವಾದಾಗಿನಿಂದ ಮುಡಾದಲ್ಲಿನ ಹಲವಾರು ಕರ್ಮಕಾಂಡಗಳು ಬಯಲಾಗುತ್ತಲೇ ಇವೆ.. ಇದೀಗ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ 296 ಪುಟಗಳ ದೂರು ಸಲ್ಲಿಕೆಯಾಗಿದೆ.
100 ಕೋಟಿಗೂ ಅಧಿಕ ನಷ್ಟ ಆಗಿದೆ, CBI ತನಿಖೆ ನಡೆಸಿ ಎಂದು ವಕೀಲ ರವಿಕುಮಾರ್ ಎಂಬುವವರು ಪ್ರಧಾನಿ ಮೋದಿಗೆ ದೂರು ಸಲ್ಲಿಸಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಒಂದರ ಮೇಲೊಂದು ಅಕ್ರಮಗಳು ಬಯಲಾಗುತ್ತಲೇ ಇವೆ. ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 23 ಸೈಟ್ ಗಳನ್ನು ಕೇವಲ 3 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಸರ್ಕಾರಕ್ಕೆ 300 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಶ್ರೀಮತಿ.ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.