ತಪ್ಪು ಮೆಡಿಸಿನ್‌ನಿಂದ ಬಾಣಂತಿ ಸಾವು..? ಬಿಮ್ಸ್ ವೈದ್ಯರ ವಿರುದ್ಧ ಪೋಷಕರ ಆರೋಪ
ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ನಕಲಿ ಐವಿ ಲ್ಯಾಕ್ಟೆಸ್ ದ್ರಾವಣದಿಂದಾಗಿ ಬಾಣಂತಿಯರ ಸರಣಿ ಸಾವುಗಳಾಗಿದ್ದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕಳಪೆ ದ್ರಾವಣವನ್ನು ಪೂರೈಸಿರುವ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ಬಾಣಂತಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.
ಹುಕ್ಕೇರಿ ತಾಲೂಕಿನ ಗೌಡವಾಡದ ವೈಶಾಲಿ ಕೊಟಬಾಗಿ ಅವರಿಗೆ 4 ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ವೈದ್ಯರಿಲ್ಲ ಎಂದು ಬೆಳಗಾವಿ ಬಿಮ್ಸ್ಗೆ ಸ್ಥಳಾಂತರ ಮಾಡಿದ್ದರು. ಶನಿವಾರ ಬೆಳಗ್ಗೆ ಬಿಮ್ಸ್ನಲ್ಲಿ ವೈಶಾಲಿಗೆ ಸಿಜೇರಿಯನ್ ಆಗಿದ್ದು, ಹೆಣ್ಣು ಮಗುವಿಗೆ ಜನ್ಮಕೊಟ್ಟಿದ್ದಾರೆ.
ಬಳಿಕ ವೈಶಾಲಿ ಆರೋಗ್ಯವಾಗಿ ಇದ್ದರು ಎನ್ನಲಾಗಿದೆ. ಆದರೆ ಭಾನುವಾರ ಬೆಳಗ್ಗೆ ವೈಶಾಲಿಗೆ ಎದೆನೋವು ಕಾಣಿಸಿಕೊಂಡಿದ್ದು, ಐಸಿಯುಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವೈಶಾಲಿ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ವೈಶಾಲಿ ಸಾವಿಗೆ ಕಾರಣ ಎಂದು ಕುಟುಂಬದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲಿ ಸಾವಿನ ಸತ್ಯ ಬಯಲಾಗಲಿದೆ. ಇತ್ತ ಯಾವುದೋ ಮಾತ್ರೆಗಳನ್ನು ನೀಡಿದ್ದಕ್ಕೆ ಈ ರೀತಿ ಆಗಿದೆ ಅಂತ ಕುಟುಂಬದರು ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.