ಸಿ. ಟಿ ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಸಿ. ಟಿ ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿ. ಟಿ ರವಿ ಅವರಿಗೆ ಏನಾಗಿದೆ ಗಾಯ, ಎಷ್ಟಾಗಿದೆ ಗಾಯ? ಪೊಲೀಸರು ಎನ್ ಕೌಂಟರ್ ಮಾಡುತ್ತಿದ್ದರು ಅಂತಾರಲ್ಲಾ? ನಾಚಿಕೆ ಆಗಲ್ವ ನಿಮಗೆ? ಇಡೀ ಕರ್ನಾಟಕದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ.
ಕಾನೂನು ಪ್ರಕಾರ ಪೊಲೀಸರು ಏನು ಮಾಡಬೇಕೊ ಅದನ್ನು ಮಾಡಿದ್ದಾರೆ. ಪ್ರಕರಣದ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಿ. ಟಿ ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ. ಸಾಧ್ಯವಾದರೆ ಭೇಟಿಯೂ ಆಗುತ್ತೇನೆ ಎಂದು ಹೇಳಿದ್ದಾರೆ.
ಸಿ. ಟಿ ರವಿ ತಮ್ಮ ವಿರುದ್ಧ ಬಳಸಿದ ಅಶ್ಲೀಲ ಪದ ಬಳಕೆಯ ವಿಡಿಯೋವನ್ನು ಇದೇ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಬಿಡುಗಡೆಗೊಳಿಸಿದರು. ಎರಡು ಪ್ರತ್ಯೇಕ ವಿಡಿಯೋಗಳ ಪೈಕಿ ಒಂದರಲ್ಲಿ ತಮಗೆ ಆಕ್ಷೇಪಾರ್ಹ ಪದ ಬಳಸಿದ್ದರೆ, ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಕ್ಟ್ ಅಂದಿದ್ದಾರೆ ಎನ್ನಲಾದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.