ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಸಾವು
ಹುಬ್ಬಳ್ಳಿ: ನಿದ್ದೆ ಮಂಪರಲ್ಲಿ ಸಿಲಿಂಡರ್ಗೆ ಕಾಲು ತಾಗಿದ ಪರಿಣಾಮ ದೇವರ ಮುಂದೆ ಇದ್ದ ದೀಪಕ್ಕೆ ತಗುಲಿ ಸಿಲಿಂಡರ್ ಬ್ಲಾಸ್ಟ್ ಆಗಿ 9 ಜನ ಮಾಲಾಧಾರಿಗಳಿಗೆ ಗಾಯಗಳಾಗಿರುವಂತಹ ಘಟನೆ ಜರುಗಿತ್ತು. ಆದ್ರೆ ಇದೀಗ ಅವರಲ್ಲಿ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ.
ನಿಜಲಿಂಗಪ್ಪ ಮಲ್ಲಪ್ಪ ಬೇಪೂರು (58), ಸಂಜಯ್ ಪ್ರಕಾಶ್ ಸವದತ್ತಿ (17) ಮೃತ ಅಯ್ಯಪ್ಪ ಮಾಲಾಧಾರಿಗಳು. ಹುಬ್ಬಳ್ಳಿಯ ಅಚ್ಚವನ ಕಾಲೋನಿಯ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿತ್ತು.
ಘಟನೆಯಲ್ಲಿ ಒಂಬತ್ತು ಜನ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳಿಗೆ ಕಳೆದ ಮೂರು ದಿನಗಳಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 9 ಮಾಲಾಧಾರಿಗಳ ಪೈಕಿ ಇಬ್ಬರು ಕೊನೆಯುಸಿರೆಳೆದಿದ್ದಾರೆ.