ರಾಜ್ಯದ ಜನರಿಗೆ ಗುಡ್ ನ್ಯೂಸ್..! ನಾಳೆ ಯಾವುದೇ ಸಾರಿಗೆ ಮುಷ್ಕರ ಇಲ್ಲ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 31ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೇರಿದಂತೆ, ಒಟ್ಟು ಆರು ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಸದ್ಯ ಸಿಎಂ ಸಿದ್ದರಾಮಯ್ಯರೊಂದಿಗಿನ ಸಭೆ ಬಳಿಕ ಮುಷ್ಕರ ಕೈಬಿಡಲಾಗಿದೆ. ಹಾಗಾಗಿ ಮಂಗಳವಾರ ಎಂದಿನಂತೆ ಕೆಎಸ್ಆರ್ಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಗಳು ಸಂಚಾರ ಮಾಡಲಿವೆ. ಸಂಕ್ರಾಂತಿ ಹಬ್ಬದ ನಂತರ ಜಂಟಿ ಕ್ರಿಯಾ ಸಮಿತಿ ಜೊತೆಗೆ ಸಿಎಂ ಮತ್ತೆ ಸಭೆ ನಡೆಸಲಿದ್ದಾರೆ.
ಹೌದು ಮಂಗಳವಾರ ನಡೆಯಬೇಕಿದ್ದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರವನ್ನು ಮುಂದೂಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಜಂಟಿ ಕ್ರಿಯಾ ಸಮಿತಿಯಿಂದ ಆದೇಶ ಪ್ರಕಟಿಸಿದೆ. ಮುಷ್ಕರಕ್ಕೆ ಬೆಂಬಲ ನೀಡಿದ್ದ ಸಂಘಟನೆಗಳೊಂದಿಗೆ ಸಭೆ ನಡೆಸಿದ ಬಳಿಕ ಆದೇಶ ಪ್ರಕಟಿಸಲಾಗಿದೆ. ಸಭೆಗೂ ಮುನ್ನ ವೇತನ ಪರಿಷ್ಕರಣೆಗೆ ಸಿಎಂ 2,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳಿದ್ದರು.