ಪ್ರತ್ಯೇಕ ಅಪಘಾತದಲ್ಲಿ 14 ಜನ ಸಾವು ಪ್ರಕರಣ: ಸರ್ಕಾರದಿಂದ ಪರಿಹಾರ ಘೋಷಣೆ
ಬೆಂಗಳೂರು: ಗುಳ್ಳಾಪುರ ಹಾಗೂ ರಾಯಚೂರಿನ ಸಿಂಧನೂರು ಅಪಘಾತಗಳಲ್ಲಿ 14 ಜನ ಮೃತಪಟ್ಟಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಅದಲ್ಲದೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ,
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ 3 ಲಕ್ಷ ಪರಿಹಾರ ರೂ. ನೀಡಲಾಗುವುದು. ಜೊತೆಗೆ ಅಪಘಾತದಲ್ಲಿ ಗಾಯಗೊಂಡವರ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಅವಸರ, ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆ ಅಪಘಾತಕ್ಕೆ ಕಾರಣ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷಿತರಾಗಿರಿ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.