ಬಳ್ಳಾರಿಯಲ್ಲಿ ಮತ್ತೊಬ್ಬ ಬಾಣಂತಿ ಸಾವು: ಬಿಮ್ಸ್ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಬಳ್ಳಾರಿ: ರಾಜ್ಯದಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಬೆಳಕಿಗೆ ಬಂದ ಬಳಿಕ ರಾಜ್ಯದ ಹಲವೆಡೆ ನಿರಂತರವಾಗಿ ಪ್ರಕರಣಗಳು ವರದಿಯಾಗುತ್ತಿವೆ. ಕೆಲ ದಿನಗಳ ಹಿಂದೆ ಕಲಬುರಗಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಾಣಂತಿಯರು ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಬೆಳಗಾವಿ ಜಿಲ್ಲೆಯಲ್ಲಿಯೇ ಬಾಣಂತಿಯೊಬ್ಬಳು ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಇದೀಗ ಮತ್ತೋರ್ವ ಬಾಣಂತಿ ಮಹಿಳೆ ಬಳ್ಳಾರಿಯಲ್ಲಿ ಮೃತಪಟ್ಟಿದ್ದಾರೆ.
ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಿವಾಸಿ ಮಹಾದೇವಿ (21) ಮೃತ ಬಾಣಂತಿ ಎಂದು ಗುರುತಿಸಲಾಗಿದೆ. ಮಹಾದೇವಿ ಅವರಿಗೆ ಜನವರಿ 25ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಸಿಸೇರಿಯನ್ ಬಳಿಕ ಬಾಣಂತಿ ಮಹಾದೇವಿ ಆರೋಗ್ಯವಾಗಿದ್ದರು. ಸಿಸೇರಿಯನ್ ಆದ ಐದು ದಿನಗಳ ಬಳಿಕ ಮಹಾದೇವಿ ಅವರಿಗೆ ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಕುಟುಂಬಸ್ಥರ ಬಳಿ ಹೇಳಿದ್ದಾರೆ.
ಆದರೆ, ಶುಕ್ರವಾರ ರಾತ್ರಿ ತೀವ್ರ ಅಸ್ವಸ್ಥವಾಗಿ ಬಾಣಂತಿ ಮಹಾದೇವಿ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮಹಾದೇವಿ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಬಿಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.