ಅತ್ತೆ ಕೊಲ್ಲಲು ಡಾಕ್ಟರ್ ಸಹಾಯ ಕೇಳಿದ ಸೊಸೆ..! ಸಂಜಯನಗರ ಪೊಲೀಸ್ ಠಾಣೆಗೆ ದೂರು
ಬೆಂಗಳೂರು: ಒಂದು ಕುಟುಂಬ ಅಂದ್ ಮೇಲೆ ಅಲ್ಲಿ ಸಣ್ಣ-ಪುಟ್ಟ ಜಗಳ, ಮನಸ್ತಾಪಗಳು ಕಾಮನ್. ಇನ್ನೂ ಅತ್ತೆ-ಸೊಸೆ ಒಂದೇ ಮನೆಯಲ್ಲಿ ವಾಸವಾಗಿದ್ದರೆ ಜಗಳವಾಡದೇ ಇರುವುದುಂಟೆ. ಎಷ್ಟೇ ಆಪ್ತವಾಗಿದ್ದರೂ ಕೂಡಾ ಕೆಲವೊಮ್ಮೆ ಅತ್ತೆ ಮತ್ತು ಸೊಸೆ ಮಧ್ಯೆ ಜಗಳಗಳು ಏರ್ಪಡುತ್ತವೆ. ಆದ್ರೆ ಇಲ್ಲೊಬ್ಬ ಸೊಸೆ ತನ್ನ ಅತ್ತೆಯನ್ನು ಕೊಲ್ಲಲು ಮಾತ್ರೆಗಳ ಬಗ್ಗೆ ಹೇಳಿ ಅಂತ ಬೆಂಗಳೂರಿನ ವೈದ್ಯರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಈ ಘಟನೆಯಿಂದ ವೈದ್ಯರು ಆಘಾತಕ್ಕೊಳಗಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಹೌದು ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಎಂದು ಸೊಸೆ ವೈದ್ಯರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾಳೆ. ಮಹಿಳೆಯ ಸಂದೇಶ ಕಂಡು ವೈದ್ಯರು ಅಚ್ಚರಿಗೊಂಡಿದ್ದಾರೆ. ಬೆಂಗಳೂರು ಮೂಲದ ವೈದ್ಯರಾದ ಡಾ. ಸುನಿಲ್ ಕುಮಾರ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಓರ್ವ ಮಹಿಳೆ ಪರಿಚಯವಾಗಿದ್ದಾಳೆ. ಮಹಿಳೆ ಇನ್ಸ್ಟಾಗ್ರಾಮ್ ಮೂಲಕ ಡಾ. ಸುನಿಲ್ ಕುಮಾರ್ರ ದೂರವಾಣಿ ಸಂಖ್ಯೆ ಪಡೆದಿದ್ದಾಳೆ. ನಂತರ, ಸೋಮವಾರ ಮಹಿಳೆ, ಡಾ. ಸುನಿಲ್ ಕುಮಾರಿಗೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿದ್ದಾಳೆ.
ಕನ್ನಡದಲ್ಲಿ ಸಂದೇಶ ಕಳುಹಿಸಿ ಮಾತು ಆರಂಭಿಸಿದರು. ನೀವು ನನಗೆ ಬೈಯುವುದಿಲ್ಲ ಎಂದರೆ ನಿಮ್ಮನ್ನು ಒಂದು ಮಾತು ಕೇಳುತ್ತೇನೆ ಎಂದರು. ಬಳಿಕ ಅತ್ತೆ ತುಂಬ ಕಿರುಕುಳ ನೀಡುತಿದ್ದಾರೆ. ಅವರನ್ನು ಸಾಯಿಸಲು ಎರಡು ಮಾತ್ರೆ ಕೊಡಿ ಎಂದರು.
ಈ ರೀತಿಯಾಗಿ ಮಹಿಳೆ ಮತ್ತು ವೈದ್ಯರ ನಡುವೆ ಸಂಭಾಷಣೆ ನಡೆದಿದೆ. ಸೊಸೆ ಅತ್ತೆಯನ್ನು ಸಾಯಿಸಲು ವೈದ್ಯರ ಬಳಿ ಮಾತ್ರೆ ಕೇಳಿದ್ದಾರೆ. ಆ ಬಳಿಕ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿದ್ದು, ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ. ಮಹಿಳೆಯ ಸಂದೇಶ ಓದಿ ಶಾಕ್ ಆದ ವೈದ್ಯ ಸುನಿಲ್ ಕುಮಾರ್ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.