ರಾತ್ರಿ ವೇಳೆ ಮಾರಕಾಸ್ತ್ರ ಹಿಡಿದು ಪುಂಡಾಟ ಪ್ರಕರಣ: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು!
ಬೆಂಗಳೂರು: ನಗರದಲ್ಲಿ ಪುಂಡರ ಉಪಟಳ ಮುಂದುವರಿದಿದ್ದು,. ಮಧ್ಯರಾತ್ರಿ ನಡುರಸ್ತೆಯಲ್ಲೇ ಮಾರಕಾಸ್ತ್ರ ಹಿಡಿದು ಪುಂಡಾಟ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರನ್ನು ಡಿಜೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಂಜಮತ್, ನಯೀಮ್ ಪಾಷ, ಅರಾಫತ್, ಶಾಹಿಲ್, ಅದ್ನಾನ್ ಬಂಧಿತರು. ಇದೇ ತಿಂಗಳ ಕಳೆದ 13ರಂದು ಮಧ್ಯರಾತ್ರಿ ಶಬ್ ಎ ಬಾರತ್ ಹಬ್ಬದ ಪ್ರಯುಕ್ತ 25ಕ್ಕೂ ಹೆಚ್ಚು ಮಂದಿ ಕೆಜಿ ಹಳ್ಳಿಯ ನೂರ್ ಮಸೀದಿ ಬಳಿ ಸೇರಿದ್ದರು. ಈ ವೇಳೆ ರೀಲ್ಸ್ ಹುಚ್ಚಿಗಾಗಿ ಅರ್ಫಾತ್, ಸಾಹಿಲ್ ಸೇರಿದಂತೆ ಇನ್ನಿತರರು ಸೇರಿ ವ್ಹೀಲಿಂಗ್ ಪ್ಲ್ಯಾನ್ ಮಾಡಿದ್ದಾರೆ.
ಪ್ಲ್ಯಾನ್ ಮಾಡಿದ ಪುಂಡರ ಗ್ಯಾಂಗ್ ಕೆಜಿ ಹಳ್ಳಿಯ ಮೇನ್ರೋಡ್ನಲ್ಲಿ ತ್ರಿಬಲ್ ರೈಡಿಂಗ್ನಲ್ಲಿ ಹೋಗಿದ್ದಾರೆ. ಅಲ್ಲಿಂದ ಹೊಸಕೋಟೆ ಟೋಲ್ವರೆಗೂ ಹೋಗಿ ಮತ್ತೆ ಅದೇ ರೀತಿ ಕೆಜಿ ಹಳ್ಳಿಗೆ ವಾಪಸ್ ಆಗಿದ್ದಾರೆ. ಏರಿಯಾಗಳಲ್ಲಿ ರ್ಯಾಶ್ ಡ್ರೈವ್ ಮಾಡ್ತಿದ್ದ ಟೀಂ ಆ ಮಧ್ಯರಾತ್ರಿ ಲಾಂಗ್ ಹಿಡಿದು ವ್ಹೀಲಿಂಗ್ ಮಾಡಿತ್ತು.
ಹಬ್ಬದ ಪ್ರಯುಕ್ತ ಪೂರ್ವ ವಿಭಾಗದಲ್ಲಿ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಆದರೂ ಕೂಡ ಪುಂಡರ ಗ್ಯಾಂಗ್ ಮಾರಕಾಸ್ತ್ರ ಹಿಡಿದು ರ್ಯಾಶ್ ಡ್ರೈವ್ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಪೊಲೀಸರ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಸದ್ಯ ಐದು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಕಮಿಷನರ್, ಉಳಿದವರಿಗಾಗಿ ಹುಡುಕಾಟ ನಡೆಸುವಂತೆ ಸೂಚನೆ ನೀಡಿದ್ದು, ತನಿಖೆ ಮುಂದುವರೆದಿದೆ.