ಇನ್ಮುಂದೆ ಹೋಟೆಲ್, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು: ಬೆಂಗಳೂರಿನ ಹಲವೆಡೆ ಇಡ್ಲಿ ತಯಾರಿಕಾ ಘಟಕಗಳು ಮತ್ತು ತಿಂಡಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಆಹಾರ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು, ಸುಮಾರು 500 ಇಡ್ಲಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದರು. ಪರೀಕ್ಷೆಗೆ ಒಳಪಡಿಸಿದಾಗ, ಅವುಗಳಲ್ಲಿ 35ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್‌ಗಳು ಅತ್ಯಂತ ಅಪಾಯಕಾರಿ ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಕಂಡುಬಂದಿತ್ತು.
ಇದರ ಬೆನ್ನಲ್ಲೇ ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹೋಟೆಲ್, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಇನ್ನು ಮುಂದೆ ಬಳಸುವಂತಿಲ್ಲ. ಆಹಾರ ತಯಾರಿಕೆ, ವಿತರಣೆ ವೇಳೆ ಕೂಡ ಪ್ಲಾಸ್ಟಿಕ್ ಬಳಸಬಾರದು.
ಆಹಾರದ ಬಿಸಿಗೆ ಪ್ಲಾಸ್ಟಿಕ್ ನಿಂದ ಹೊರಸೂಸುವ ಪದಾರ್ಥಗಳು ವಿಷಕಾರಿಯಾಗುತ್ತಿದ್ದು ಕ್ಯಾನ್ಸರ್ ಕಾರಕ ಅಂಶಗಳನ್ನು ಸಹ ಹೊರಸೂಸುತ್ತದೆ ಎಂದು ವರದಿಯಿಂದ ದೃಢಪಟ್ಟಿದೆ, ಈ ಹಿನ್ನೆಲೆಯಲ್ಲಿ ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬದಲಿಗೆ ಬಟ್ಟೆಯನ್ನೇ ಬಳಸಬೇಕು ಎಂದು ಕಡ್ಡಾಯವಾಗಿ ನಿಯಮ ಹೊರಡಿಸಲಾಗುವುದು ಎಂದು ತಿಳಿಸಿದರು.