ಆಟೋಗೆ ಬಿಎಂಟಿಸಿ ಬಸ್ ಡಿಕ್ಕಿ: ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಸಾವು!
ಬೆಂಗಳೂರಿನ ಹನುಮಂತನಗರದ ಸೀತಾ ಸರ್ಕಲ್ ಬಳಿ ಭೀಕರ ಅಪಘಾತ ಸಂಭವಿಸಿ ಆಟೋಚಾಲಕ ಹಾಗೂ ಓರ್ವ ಪ್ರಯಾಣಿಕ ಮೃತಪಟ್ಟಿರುವ ಘಟನೆ ನಡೆದಿದೆ. ಆಟೋ ಚಾಲಕ ವಿಜಯ್ ಕುಮಾರ್(50) ಹಾಗೂ ಪ್ರಯಾಣಿಕ ವಿಷ್ಣುಬಾಟಿಯ (70) ಎಂದು ಮೃತ ದುರ್ಧೈವಿಗಳು,
ಇಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಹೊಸಕೆರೆ ಹಳ್ಳಿ ಕ್ರಾಸ್ ಸೀತಾ ಸರ್ಕಲ್ ಸಮೀಪ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಇದರ ಹಿಂದೆ ಬರುತ್ತಿದ್ದ ಆಟೋ ಬಸ್‌ಗೆ ಡಿಕ್ಕಿ ಹೊಡೆದಿದೆ.
ಮುಂದೆ ಇದ್ದ ಬಿಎಂಟಿಸಿ ಬಸ್ ದಿಢೀರ್ ಬ್ರೇಕ್ ಹಾಕಿದ್ದರಿಂದ ಹಿಂದೆ ಇದ್ದ ಆಟೋ ಡಿಕ್ಕಿ ಹೊಡೆದಿದೆ. ಅದೇ ವೇಳೆಗೆ ಹಿಂದೆ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬಿಎಂಟಿಸಿ ಬಸ್ ಜಪ್ತಿ ಮಾಡಿ ಚಾಲಕನನ್ನು ಸಹ ವಶಕ್ಕೆ ಪಡೆದು ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.