ಸಿನಿಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ₹200 ಮಾತ್ರ
ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪದ ಟಿಕೆಟ್ ದರ ಜಾರಿಗೆ ಬರಲಿದ್ದು, ಟಿಕೆಟ್ ದರ ₹200 ಮಾತ್ರ ಇರಲಿದೆ. ಹೌದು ಸಿನಿಮಾ ಕ್ಷೇತ್ರವನ್ನ ಸಿನಿಮಾ ಉದ್ಯಮ ಎಂದು ಪರಿಗಣಿಸಿ ಕೈಗಾರಿಕಾ ನೀತಿಯಡಿ ತರಲು ನಿರ್ಧಾರ ಮಾಡಲಾಗಿದೆ. ಕನ್ನಡ ಸಿನಿಮಾಗಳಿಗೆ OTT ವೇದಿಕೆ ಸೃಷ್ಟಿಸಲು ನಿರ್ಧರಿಸಲಾಗಿದೆ.
ಕರ್ನಾಟಕದ ಸಿನಿಮಾ ಪ್ರೇಮಿಗಳ ಬಹುವರ್ಷದ ಬೇಡಿಕೆ ಆಗಿದ್ದ ಮಲ್ಟಿಪ್ಲೆಕ್ಸ್ ಟಿಕೆಟ್ ದರ ನಿಯಂತ್ರಣ ಮಾಡುವ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ. ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ನಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು 200 ರೂಪಾಯಿಗೆ ನಿಗದಿಪಡಿಸಿದ್ದಾರೆ. ನೆರೆ ರಾಜ್ಯಗಳಾದ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರ ಬಹುತೇಕ ದುಪ್ಪಟ್ಟು ಇತ್ತು.
ಕೆಲ ಪರಭಾಷೆ ಸಿನಿಮಾಗಳಂತೂ ಕನಿಷ್ಟ ಟಿಕೆಟ್ ದರವನ್ನು 1000 ರೂಪಾಯಿ ಇರಿಸಿ ಸಿನಿಮಾ ಬಿಡುಗಡೆ ಮಾಡಿದ ಉದಾಹರಣೆಗಳೂ ಸಹ ಇವೆ. ಇದರಿಂದ ಕನ್ನಡ ಸಿನಿಮಾಗಳಿಗೆ ದೊಡ್ಡ ಹೊಡೆತ ಬಿದ್ದಿತ್ತು. ಇದೇ ಕಾರಣಕ್ಕೆ ಸಿನಿಮಾ ಮಂದಿ ಸಹ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿದ್ದರು.