ನವದೆಹಲಿ:- ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಅಧಿಕೃತವಾಗಿ ಕಾನೂನು ಜಾರಿಗೆ ತರುವಲ್ಲಿ ಕೇಂದ್ರ ಯಶಸ್ವಿಯಾಗಿದೆ.
ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಚರ್ಚಾಸ್ಪದ ವಕ್ಫ್ ತಿದ್ದುಪಡಿ ಮಸೂದೆ-2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಶನಿವಾರ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2025 ಕ್ಕೆ ಸಹ ತಮ್ಮ ಒಪ್ಪಿಗೆ ನೀಡಿದ್ದಾರೆ.
ಈ ಮೂಲಕ ಸಂಸತ್ತಿನ ಈ ಕಾಯ್ದೆಗೆ ಏಪ್ರಿಲ್ 5, 2025 ರಂದು ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದೆ. ವಕ್ಫ್ (ತಿದ್ದುಪಡಿ) ಕಾಯ್ದೆ, 2025″ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದೆ. ಮಧ್ಯಾಹ್ನ ಆರಂಭವಾಗಿ ರಾತ್ರಿಯಿಡೀ ಮುಂದುವರಿದು 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ ರಾಜ್ಯಸಭೆಯು ವಿವಾದಾತ್ಮಕ ಶಾಸನಕ್ಕೆ ಅನುಮೋದನೆ ನೀಡಿದ ನಂತರ ಕಳೆದ ಶುಕ್ರವಾರ ಮುಂಜಾನೆ ಸಂಸತ್ತು ಮಸೂದೆಯನ್ನು ಅಂಗೀಕರಿಸಿತು.
ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪರವಾಗಿ 128 ಸದಸ್ಯರು ಮತ್ತು 95 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಅದಕ್ಕೂ ಮುನ್ನ ಗುರುವಾರ ಮುಂಜಾನೆ ಲೋಕಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು, 288 ಸದಸ್ಯರು ಪರವಾಗಿ ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸುವುದರ ಜೊತೆಗೆ ಸಂಸತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯನ್ನು ಸಹ ಅನುಮೋದಿಸಿತು, ರಾಷ್ಟ್ರಪತಿಗಳು ತಮ್ಮ ಒಪ್ಪಿಗೆಯನ್ನು ನೀಡಿದ ನಂತರ, ಮುಸಲ್ಮಾನ್ ವಕ್ಫ್ ಕಾಯ್ದೆ, 1923 ನ್ನು ರದ್ದುಗೊಳಿಸಲಾಗಿದೆ.