ನಗರ ಪೊಲೀಸ್ ಆಯುಕ್ತರನ್ನು ಬಿಡದ ಸೈಬರ್ ಚೋರರು..! ದಯಾನಂದ್ ಹೆಸರಲ್ಲಿ ಫೇಕ್ ಅಕೌಂಟ್ ಓಪನ್
ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆಯುಕ್ತ ಬಿ ದಯಾನಂದ ಹೇಳಿದ್ದರು. ಸರ್ಕಾರಿ ಅಧಿಕಾರಿಗಳಂತೆ ನಟಿಸಿ ನಿಮ್ಮನ್ನು ಯಾಮಾರಿಸಬಹುದು. ಹಣಕ್ಕೆ ಬೇಡಿಕೆ ಇಡಬಹುದು.
ಹಾಗಾಗಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದರು. ಆದ್ರೆ ಇದೀಗ ಫೇಸ್ಬುಕ್ನಲ್ಲಿ ಬಿ.ದಯಾನಂದ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿರುವ ವಂಚಕರು ಜನರಿಗೆ ರಿಕ್ವೆಸ್ಟ್ ಕಳಿಸುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು ಬಿ. ದಯಾನಂದ್ ಅವರ ಹೆಸರಿನಲ್ಲಿ ತೆರೆಯಲಾಗಿರುವ ಈ ನಕಲಿ ಫೇಸ್‌ಬುಕ್ ಖಾತೆಯು ಹಿಂದಿ ಭಾಷೆಯಲ್ಲಿದೆ. ಈ ಖಾತೆಯ ಮೂಲಕ ಖದೀಮರು, ಸಾಮಾನ್ಯ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ.
ಒಂದು ವೇಳೆ ಈ ರಿಕ್ವೆಸ್ಟ್‌ಗಳನ್ನು ಸ್ವೀಕರಿಸಿದರೆ, ವಂಚಕರು ವೈಯಕ್ತಿಕ ಮಾಹಿತಿಯನ್ನು ಕದಿಯುವ ಅಥವಾ ಹಣಕಾಸಿನ ವಂಚನೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಈ ನಕಲಿ ಖಾತೆಯ ಚಿತ್ರಗಳು ಮತ್ತು ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿವೆ.