1ನೇ ತರಗತಿಗೆ ಈ ಬಾರಿ 6 ವರ್ಷ ಕಡ್ಡಾಯವಾಗಿರಬೇಕು ಅನ್ನೋ ನಿಯಮ ಇಲ್ಲ: ಮಧು ಬಂಗಾರಪ್ಪ
ಬೆಂಗಳೂರು: ಒಂದನೇ ತರಗತಿಗೆ ಈ ಬಾರಿ 6 ವರ್ಷ ಕಡ್ಡಾಯವಾಗಿರಬೇಕು ಅನ್ನೋ ನಿಯಮ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಲ್ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ. ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ವಯಸ್ಸಿನ ಮಿತಿಯ ಬಗ್ಗೆ ಎಲ್ಲರೂ ಒತ್ತಡ ಹೇರುತ್ತಾ ಇದ್ದರು. ಈ ವಿಚಾರದಲ್ಲಿ ಪೋಷಕರಿಗೆ ಒಂದು ಮನವಿಯನ್ನು ಮಾಡುತ್ತಿದ್ದೇನೆ. ಮಕ್ಕಳನ್ನು ಯಂತ್ರದ ತರ ಓದಿಸಬೇಡಿ. ಹಾಗೆ ಮಾಡಿದರೆ ಮಕ್ಕಳಲ್ಲಿ ಒತ್ತಡ ಹೆಚ್ಚಾಗುತ್ತದೆ ಎಂದರು.
ವಯೋಮಿತಿ ವಿಚಾರದಲ್ಲಿ ಪೋಷಕರು ಗೊಂದಲದಲ್ಲಿದ್ದಾರೆ. ದೇಶದಲ್ಲಿ ಎಲ್ಲ ಕಡೆಗಳಲ್ಲಿ ಒಂದನೇ ತರಗತಿ ಸೇರ್ಪಡೆಗೆ ಆರು ವರ್ಷ ವಯೋಮಿತಿ ಇದೆ. ಎರಡು ತಿಂಗಳು ಮಾತ್ರ ಸಡಿಲಿಕೆ ಮಾಡಬಹುದಷ್ಟೆ. ನಮ್ಮದು ಎಸ್‌ಇಪಿ ಇರುವುದರಿಂದ, ಅವರ ಬಳಿ ಕೇಳಿದಾಗ, ಮಕ್ಕಳು ಕಡಿಮೆ ವಯಸ್ಸಿನಲ್ಲೇ ಸೇರಿಕೊಳ್ಳುತ್ತಿದ್ದಾರೆ ಎಂದಿದ್ದರು ಎಂದು ಸಚಿವರು ತಿಳಿಸಿದರು.