ಭಾರತ-ಪಾಕ್ ಮಧ್ಯೆ ಯುದ್ಧದ ಸ್ಥಿತಿ : ಸಿನಿಮಾ ಕೆಲಸ ಮುಂದೂಡಿದ ಕಮಲ್ ಹಾಸನ್!
ಭಾರತ-ಪಾಕ್ ಮಧ್ಯೆ ಯುದ್ಧದ ಸ್ಥಿತಿ ಹಿನ್ನೆಲೆ ಕಮಲ್ ಹಾಸನ್ ಅವರು, ಸಿನಿಮಾ ಕೆಲಸ ಮುಂದೂಡಿದ್ದಾರೆ. ಯುದ್ಧದ ಪರಿಸ್ಥಿತಿ ನಿರ್ಮಾಣ ಆಗುತ್ತಿದ್ದಂತೆ ಬಿಸಿಸಿಐ, ಐಪಿಎಲ್ ಅನ್ನು ರದ್ದು ಮಾಡಿದೆ. ಕೆಲ ಸಿನಿಮಾಗಳು ಸಹ ಬಿಡುಗಡೆಯನ್ನು ರದ್ದು ಮಾಡಿವೆ. ಇದೀಗ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಸಹ ತಮ್ಮ ಸಿನಿಮಾದ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ
ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಕಮಲ್ ಹಾಸನ್ ಮುಂದೂಡಿದ್ದಾರೆ. ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಮೇ 16ರಂದು ನಡೆಯಬೇಕಿತ್ತು. ಆದರೆ ಭಾರತದ ಗಡಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೇನೆಯು ವೈರಿ ದೇಶದೊಟ್ಟಿಗೆ ಯುದ್ಧದಲ್ಲಿ ನಿರತವಾಗಿರುವ ಕಾರಣ ಇಂಥಹಾ ಆತಂಕದ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಬೇಡವೆಂದು ನಿಶ್ಚಯಿಸಿ ಆಡಿಯೋ ಲಾಂಚ್ ಅನ್ನು ರದ್ದು ಮಾಡಲಾಗಿದೆ.
ಈ ಬಗ್ಗೆ ಹೇಳಿಕೆ ಹೊರಡಿಸಿರುವ ಕಮಲ್ ಹಾಸನ್, ‘ದೇಶದ ಗಡಿ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ದೇಶದಾದ್ಯಂತ ಇರುವ ಹೈ ಅಲರ್ಟ್ ಅನ್ನು ಗಮನಿಸಿ ಮೇ 16 ರಂದು ನಿಗದಿಯಾಗಿದ್ದ ನಮ್ಮ ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮುಂದೂಡುತ್ತಿದ್ದೇವೆ. ನಮ್ಮ ಸೈನಿಕರು ದೇಶದ ಗಡಿಯಲ್ಲಿ ಶೌರ್ಯದಿಂದ ನಿಂತು ತಾಯ್ನಾಡಿಗಾಗಿ ಹೋರಾಡುತ್ತಿರುವ ಈ ಸನ್ನಿವೇಶದಲ್ಲಿ ಒಗ್ಗಟ್ಟು ಮತ್ತು ಬೆಂಬಲದ ಅವಶ್ಯಕತೆ ಇದೆ. ಅಲ್ಲದೆ ಇದು ವೈಯಕ್ತಿಕ ಸಂಭ್ರಮಾಚರಣೆ ಮಾಡುವ ಸಮಯ ಅಲ್ಲ ಹಾಗಾಗಿ ಕಾರ್ಯಕ್ರಮ ಮುಂದೂಡಲಾಗಿದ್ದು, ಸೂಕ್ತ ಸಮಯ ನೋಡಿಕೊಂಡು ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ಕಮಲ್ ಹಾಸನ್ ಹೇಳಿದ್ದಾರೆ.