ಬೆಂಗಳೂರು ಜನ ಬ್ರ್ಯಾಂಡೆಡ್ ನರಕದಲ್ಲಿದ್ದಾರೆ, ನಗರದ ಜನ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು: ಹೆಚ್.ಡಿ ಕುಮಾರಸ್ವಾಮಿ ಕಿಡಿ
ಬೆಂಗಳೂರು: ಬೆಂಗಳೂರು ಜನ ಬ್ರ್ಯಾಂಡೆಡ್ ನರಕದಲ್ಲಿದ್ದಾರೆ. ನಗರದ ಜನ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮಳೆ ಅವಾಂತರದಿಂದಾಗಿ ಬೆಂಗಳೂರು ಜನ ಸತ್ತು ಬದುಕುತ್ತಿದ್ದರೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಧನಾ ಸಮಾವೇಶದ ಚಿಂತೆಯಾಗಿದೆ. ಒಂದು ವಾರದಿಂದ ಬಣ್ಣಬಣ್ಣದ ಸರಣಿ ಗ್ಯಾರಂಟಿ ಜಾಹೀರಾತುಗಳನ್ನು ಹಾಕುತ್ತಿದ್ದಾರೆ. ಬೆಂಗಳೂರು ಜನ ಬ್ರ್ಯಾಂಡೆಡ್ ನರಕದಲ್ಲಿದ್ದಾರೆ. ನಗರದ ಜನ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು ಎಂದು ಕಿಡಿಕಾರಿದ್ದಾರೆ.
ಜನ ಸತ್ತು ಬದುಕುತ್ತಿದ್ದರೆ ಕಾಂಗ್ರೆಸ್ ನಾಯಕರಿಗೆ ಸಾಧನಾ ಸಮಾವೇಶದ ಚಿಂತೆ. ವಾರದಿಂದ ಬಣ್ಣಬಣ್ಣದ ಸರಣಿ ಗ್ಯಾರಂಟಿ ಜಾಹೀರಾತು ಬೇರೆ. ಬೆಂಗಳೂರು ಜನ ಬ್ರ್ಯಾಂಡೆಡ್ ನರಕದಲ್ಲಿದ್ದಾರೆ. ನಗರ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು. ಕಾಂಗ್ರೆಸ್ ಸರ್ಕಾರದ ಸಾಧನೆ ಬೆಂಗಳೂರು ರಸ್ತೆಗಳಲ್ಲಿ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಸತ್ತ ಸರ್ಕಾರಕ್ಕೆ ಸಾಧನೆ ಸಮಾವೇಶ ಬೇರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತಿನ ಡಬ್ಬಾ ಹೊಡೆಯುವುದು ಬಿಟ್ಟು, ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಪಕ್ಕಕ್ಕಿಟ್ಟು ಕೆಲಸ ಮಾಡಲಿ.
ವಾರ್ ರೂಂನಲ್ಲಿ ಕೂತು ಜೆಡಿಎಸ್, ಬಿಜೆಪಿ ಮೇಲೆ ಪ್ರಾಕ್ಸಿವಾರ್ ಮಾಡಿದರೆ ಪ್ರಯೋಜನವೇನು? ಕೈಲಾಗದವನಿಗೆ ಬಾಯಿ ಭದ್ರ ಇರುವುದಿಲ್ಲ. ಈ ಮನುಷ್ಯ ಆ ಪರಿಸ್ಥಿತಿಯಲ್ಲಿದ್ದಾರೆ. ಯಾವ ಪುರುಷಾರ್ಥಕ್ಕೆ ಗ್ರೇಟರ್ ಬೆಂಗಳೂರು? ಯಾರ ಉದ್ಧಾರಕ್ಕೆ ಬ್ರ್ಯಾಂಡ್ ಬೆಂಗಳೂರು? ಲೂಟಿ ಹೊಡೆಯೋದಕ್ಕೆ ಹೊಸ ಹೊಸ ಹೆಸರೇ? ಎರಡು ವರ್ಷಗಳಿಂದ ಬ್ರ್ಯಾಂಡ್, ಬ್ರ್ಯಾಂಡ್ ಎಂದು ಭಜನೆ ಮಾಡುತ್ತಿದ್ದೀರಲ್ಲ. ಬ್ರ್ಯಾಂಡ್ ಎಂದರೆ ಬೆಂಗಳೂರನ್ನು ಮುಳುಗಿಸುವುದಾ?
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಈ ವ್ಯಕ್ತಿ ಪಾಲಿಗೆ ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ. ಬಯಸಿದಾಗ ನೋಟಿನ ಮಳೆ ಸುರಿಸುವ ಅಕ್ಷಯಪಾತ್ರೆ. ಎರಡು ವರ್ಷಗಳಿಂದ ಸುರಿದ ನೋಟಿನ ಮಳೆ ಪ್ರಮಾಣ ಎಷ್ಟು? ಕೈ ಇಟ್ಟ ಕಡೆಯಲ್ಲಾ ದುಡ್ಡು, ಜನರ ಮೇಲೆ ತೆರಿಗೆ ಮೇಲೆ ತೆರಿಗೆ, ಎರಡು ವರ್ಷಗಳಲ್ಲಿ ಎಷ್ಟೊಂದು ಬಾರಿ ಸಾಯಿ ಬಡವಾಣೆ ಮುಳುಗಿತು? ಅಲ್ಲಿಗೆ ಡಿಸಿಎಂ ಎಷ್ಟು ಸಲ ಹೋಗಿದ್ದರು? ಈ ಹಿಂದೆ ನಗರಾಭಿವೃದ್ಧಿ ಮಂತ್ರಿ ಆಗಿದ್ದಾಗ ನಗರಕ್ಕೇನು ಮಾಡಿದ್ದರು? ಸಚಿವಗಿರಿಯನ್ನು ಸ್ವ-ನಗದು ಅಭಿವೃದ್ಧಿಗೆ ಬಳಸಿಕೊಂಡರಷ್ಟೇ ಎಂದು ಬರೆದುಕೊಂಡಿದ್ದಾರೆ.