ಕೇರಳದ ಕೊಟ್ಟಿಯೂರ್ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಟ ದರ್ಶನ್
ದಾಸ ದರ್ಶನ್ ಕೆಟ್ಟ ಸಮಯ ಕಳೆದು ಹೋಗಿ ಈಗ ಒಳ್ಳೆಯ ಸಮಯ ಬಂದಿದೆ. ದೇವರ ಮೇಲೆ ಭಾರ ಹಾಕಿರೋ ದರ್ಶನ್ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಸಾಥ್ ನೀಡಿದ್ದಾರೆ. ನೀರಿನಲ್ಲಿ ಓಡಾಡಿ ದೇವರ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ನಟ ದರ್ಶನ್ ಅವರು ದುಬೈಗೆ ಚಿತ್ರೀಕರಣಕ್ಕೆ ಹೋಗಲು ಅನುಮತಿ ಪಡೆದಿದ್ದರು. ಅವರು ಈಗಾಗಲೇ ಡೆವಿಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈಗ ವಿದೇಶದ ಶೆಡ್ಯೂಲ್ ಕೂಡಾ ಮುಗಿಸಲು ರೆಡಿಯಾಇದ್ದಾರೆ. ಇದಕ್ಕೂ ಮುನ್ನ ನಟ ಕೊಟ್ಟಿಯೂರಿಗೆ ಹೋಗಿ ಬಂದಿದ್ದಾರೆ.
ಕೊಟ್ಟಿಯೂರಿನಲ್ಲಿ ಎರಡು ದೇವಸ್ಥಾನಗಳಿವೆ. ಇಕ್ಕರೆ ಕೊಟ್ಟಿಯೂರು ಮತ್ತು ಅಕ್ಕರೆ ಕೊಟ್ಟಿಯೂರು. ಅಕ್ಕರೆ ಕೊಟ್ಟಿಯೂರು ದೇವಾಲಯವು ವೈಶಾಖ ಮಹೋತ್ಸವದ ಸಮಯದಲ್ಲಿ ಮಾತ್ರ ತೆರೆಯಲ್ಪಡುವ ತಾತ್ಕಾಲಿಕ ಮಂದಿರವಾಗಿದೆ. ಆದರೆ ಇಕ್ಕರೆ ಕೊಟ್ಟಿಯೂರು ದೇವಾಲಯವು ನಿಯಮಿತ ಪೂಜಾ ವಿಧಿಗಳನ್ನು ನಡೆಸುವ ಶಾಶ್ವತ ಮಂದಿರವಾಗಿದೆ.
ಇಲ್ಲಿನ ವೈಶಾಖ ಮಹೋತ್ಸವ ಸುಮಾರು 28 ದಿನಗಳವರೆಗೆ ನಡೆಯುತ್ತದೆ. ಈ ವರ್ಷ ಜೂ.8ರಿಂದ ಪ್ರಾರಂಭವಾಗಿ ಜು.4ರವರೆಗೆ ದೇವಸ್ಥಾನ ತೆರೆದಿರುತ್ತದೆ. ಆದರೆ ಜೂ.30ರ ನಂತರ ಮಹಿಳಾ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಜೊತೆಗೆ ಇಲ್ಲಿ ಬರುವ ಭಕ್ತಾದಿಗಳಿಗೆ ತಂಗಲು ವಸತಿ ಸೌಲಭ್ಯವು ಇರುತ್ತದೆ. ದೇವಸ್ಥಾನವು ಬೆಳಿಗ್ಗೆ 5ರಿಂದ ರಾತ್ರಿ 8:30ರವರೆಗೆ ಮಾತ್ರ ತೆರೆದಿರುತ್ತದೆ.