ಎಫ್ಐಆರ್, ಗೂಂಡಾಗಿರಿಯಂಥ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆ ಇಲ್ಲ: ಬಿ.ವೈ. ವಿಜಯೇಂದ್ರ
ಬೆಂಗಳೂರು: ಎಫ್ಐಆರ್, ಗೂಂಡಾಗಿರಿಯಂಥ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ತುರ್ತು ಪರಿಸ್ಥಿತಿ ಸಂಬಂಧ ಇಂದಿರಾ ಗಾಂಧಿಯವರನ್ನು ಕರಾಳವಾಗಿ ತೋರಿಸಿದ್ದಾರೆ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಮೂರ್ಖರಿದ್ದಾರೆ. ಶ್ರೀಮತಿ ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಮಂತ್ರಿ ಆಗಿದ್ದಾಗ 50 ವರ್ಷಗಳ ಹಿಂದೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿತ್ತು.
ಎಲ್ಲ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಆಗಿತ್ತು. ಅನೇಕರನ್ನು ಜೈಲಿಗೆ ಅಟ್ಟಿದ್ದರು. ಮಾಧ್ಯಮಗಳ ಮೇಲೂ ದಬ್ಬಾಳಿಕೆ ಮಾಡಿದ್ದರು. ಅಂಥ ಕರಾಳ ದಿನವನ್ನು ನಿನ್ನೆ ನೆನಪಿಸುವ ದಿನ. ತುರ್ತು ಪರಿಸ್ಥಿತಿಯಂಥ ಕರಾಳ ದಿನಗಳು ಮತ್ತೆ ಮರುಕಳಿಸಬಾರದು ಎಂಬ ಆಶಯ ಇದರ ಹಿಂದಿದೆ. ಶ್ರೀ
ಮತಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಆಗಿದ್ದಾಗ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂಬುದನ್ನು ನೆನಪು ಮಾಡಿಕೊಳ್ಳುವ ದಿನ. ಇಂದಿರಾ ಗಾಂಧಿ ಅವರ ನಡವಳಿಕೆ ಹಿಟ್ಲರ್ ನಂತೆ ಎಂದಲ್ಲದೆ ಇನ್ನೇನು ಹೇಳಲು ಸಾಧ್ಯ ಎಂದು ವಿಜಯೇಂದ್ರ ಅವರು ಕೇಳಿದರು.
ನಮ್ಮ ಸಾಮಾಜಿಕ ಜಾಲತಾಣದ ಟ್ವೀಟ್ ಮೇಲಿನ ಸಿದ್ದರಾಮಯ್ಯನವರ ಎಫ್ಐಆರ್, ಗೂಂಡಾಗಿರಿಯಂಥ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ಇಂಥ ನೂರು ಎಫ್ಐಆರ್ ದಾಖಲಿಸಲಿ. ನಾವು, ನಮ್ಮ ಕಾರ್ಯಕರ್ತರು ಅದನ್ನು ಎದುರಿಸಲು ಸಿದ್ಧ ಎಂದು ತಿಳಿಸಿದರು. ಇಂಥ ದಬ್ಬಾಳಿಕೆ, ಗೂಂಡಾಗರ್ದಿ ನಡೆಯಲು ಸಾಧ್ಯವಿಲ್ಲ ಎಂದು ನುಡಿದರು.