ಫೋನ್ ಮಾಡಲು ಕೊಟ್ಟ ಮೊಬೈಲ್ ವಾಪಾಸ್ ಕೇಳಿದ್ರೆ ಲಾಂಗ್ ಎತ್ತಿ ಹಲ್ಲೆ..!
ಬೆಂಗಳೂರು: ಅಪರಿಚಿತನೊಬ್ಬ ಮೊಬೈಲ್ ಕೇಳಿ ಬಳಿಕ ಲಾಂಗ್ ತೆಗೆದು ದಾಳಿ ನಡೆಸಿರುವ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಾಳಮ್ಮ ದೇವಸ್ಥಾನ ರಸ್ತೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಇಂಜಿನಿಯರ್ ಮಿಥುನ್ ಕುಮಾರ್ ಕೆಲಸ ಮಾಡುತ್ತಿದ್ದರು. ಜುಲೈ 3 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಓರ್ವ ವ್ಯಕ್ತಿ ರಸ್ತೆ ಬಳಿ ಬಂದು “ನನ್ನ ಮೊಬೈಲ್ ಹಾಳಾಗಿದೆ, ಒಂದು ಕರೆ ಮಾಡಬೇಕು” ಎಂಬ ನೆಪದಲ್ಲಿ ಮೊಬೈಲ್ ಕೇಳಿದ.
ಭದ್ರತೆಯಿಂದ ಮೊಬೈಲ್ ನೀಡಿದ ಮಿಥುನ್ ಅವರ ಮೊಬೈಲ್ ನಿಂದ ಇಬ್ಬರಿಗೆ ಕರೆ ಮಾಡಿದ ಆರೋಪಿ, ನಂತರ ಮೊಬೈಲ್ ಮರಳಿ ಕೇಳಿದಾಗ ಕೊಡುವುದಿಲ್ಲ ಎಂದು ನಿರಾಕರಿಸಿದ. ಪ್ರಶ್ನಿಸಿದ ಮಿಥುನ್ ಮೇಲೆ, ಆರೋಪಿ ಏಕಾಏಕಿ ಸ್ಕೂಟರ್ ಮ್ಯಾಟ್ ಅಡಿಯಿಂದ ಲಾಂಗ್ ತೆಗೆದು ಹಲ್ಲೆ ನಡೆಸಿದ. ಹಲ್ಲೆಯಿಂದ ಮಿಥುನ್ ಅವರ ಕೈಗೆ ಗಾಯವಾಗಿದೆ.
ಈ ಹೊತ್ತಿಗೆ ಅವರನ್ನು ಬಿಡಿಸಲು ಧಾವಿಸಿದ ಸೆಕ್ಯೂರಿಟಿ ಗಾರ್ಡ್ ಪರ್ವಿಂದ್ ಅವರ ಮೇಲೆಯೂ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ. ಈ ಸಂಪೂರ್ಣ ಘಟನೆಯು ಅಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸರು ತಕ್ಷಣ ಜಾಗೃತರಾಗಿ ಕ್ರಮ ತೆಗೆದು, ಆರೋಪಿಯಾಗಿದ್ದ ಅಸ್ಗರ್ ಎಂಬವನನ್ನು ಬಂಧಿಸಿದ್ದಾರೆ. ಆರೋಪಿಯು ಟೈರ್ ವರ್ಕ್ ಕೆಲಸ ಮಾಡುತ್ತಿದ್ದವನಾಗಿದ್ದು, ಹಲ್ಲೆಗೆ ಲಾಂಗ್ ಬಳಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.ಹಲ್ಲೆಗೊಳಗಾದ ಪರ್ವಿಂದ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.