ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ
ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದ ಹಾಗೂ ‘ಅಮೃತಧಾರೆ’ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಕಿರುತೆರೆ ನಟಿ ಮಂಜುಳಾ ಅಲಿಯಾಸ್ ಶ್ರುತಿ ಚಾಕು ಇರಿತದ ದುರ್ಘಟನೆಗೆ ಒಳಗಾಗಿದ್ದಾರೆ. ಶೀಲ ಶಂಕೆ ಹಾಗೂ ಹಣಕಾಸು ಸಮಸ್ಯೆ ಹಿನ್ನೆಲೆ ಗಂಡನಿಂದಲೇ ಈ ದುಷ್ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 4 ರಂದು ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶ್ರುತಿ ಮತ್ತು ಅವರ ಪತಿ ಅಂಬರೀಶ್ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು.
ಆದರೆ ಸಂಬಂಧದಲ್ಲಿ ಗೊಂದಲಗಳು ಹೆಚ್ಚಾದ ಕಾರಣ, ಕಳೆದ ಏಪ್ರಿಲ್ನಿಂದ ಶ್ರುತಿ ತಮ್ಮ ಅಣ್ಣನ ಮನೆಯಲ್ಲೇ ವಾಸಿಸುತ್ತಿದ್ದರು. ಗಂಡನಿಂದ ದೂರವಾಗಿದ್ದ ಅವರು, ಜುಲೈ 3ರಂದು ರಾಜಿ ಮಾಡಿಕೊಂಡು ಮರಳಿ ಒಂದಾದರು. ಆದರೆ ಮರುದಿನದಂದೇ ಪತಿ ಅಂಬರೀಶ್ ಅವರ ಮೇಲೆ ಚಾಕು ಇರಿದು ಕೊಲೆಗೆ ಯತ್ನಿಸಿದರು.
ಮಕ್ಕಳು ಕಾಲೇಜಿಗೆ ಹೋದ ನಂತರ ಪೆಪ್ಪರ್ ಸ್ಪ್ರೇ ಬಳಸಿ, ಚಾಕು ಇರಿತ ನಡೆಸಿದ್ದು, ಪಕ್ಕೆಲುಬು, ತೊಡೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಶ್ರುತಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.