ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಇಬ್ಬರ ಬಂಧನ
ಬೆಂಗಳೂರು: ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳು ಕಳಿಸುವ ಮೂಲಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಸೈಬರ್ ಕ್ರೈಮ್ ವಿಭಾಗದ ಪೊಲೀಸರು ಕ್ರಮ ಕೈಗೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಮತ್ತೊಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಟಿ ದರ್ಶನ್ ವಿರುದ್ಧ ನಡೆದ ಘಟನೆಯಲ್ಲಿ ಮೃತಪಟ್ಟ ರೇಣುಕಾಸ್ವಾಮಿ ಪರವಾಗಿ ಮಾತನಾಡಿದ್ದಕ್ಕಾಗಿ ರಮ್ಯಾ ಅವರನ್ನು ಟಾರ್ಗೆಟ್ ಮಾಡುವ ಕೆಲಸ ನಡೆದಿತ್ತು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋ ಭರವಸೆ ಇದೆ” ಎಂಬ ಹೇಳಿಕೆಯನ್ನು ರಮ್ಯಾ ನೀಡಿದ ಬಳಿಕ, ಕೆಲವು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಪರಿಣಾಮವಾಗಿ, ರಮ್ಯಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಕಮೆಂಟ್ ಬಾಕ್ಸ್ಗಳಲ್ಲಿ ಅಶ್ಲೀಲ ಕಾಮೆಂಟ್ಗಳು, ಮತ್ತು ಖಾಸಗಿ ಸಂದೇಶಗಳ ಮೂಲಕ ಅವಮಾನಿತ ಮತ್ತು ಅಶ್ಲೀಲ ಸಂದೇಶಗಳನ್ನು ಕಳಿಸಲಾಗಿತ್ತು. ಈ ಬಗ್ಗೆ ನಟಿ ರಮ್ಯಾ ಬೆಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಸೂಕ್ತ ತನಿಖೆ ನಡೆಸಿದ ಪೊಲೀಸರು ಬಳ್ಳಾರಿ ಮತ್ತು ಚಿತ್ರದುರ್ಗ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.