ಕೋವಿಡ್ ಲಾಕ್ಡೌನ್ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: 23 ಆರೋಪಿಗಳಿಗೆ ಜೈಲುಶಿಕ್ಷೆ ಮತ್ತು ದಂಡ
ತುಮಕೂರು: ಕೊರೊನಾ ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 23 ಮಂದಿಗೆ 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಿ ತುಮಕೂರು ಜಿಲ್ಲೆಯ ನ್ಯಾಯಾಲಯ ಆದೇಶ ಹೊರಡಿಸಿದೆ. ಒಟ್ಟು ₹3,45,000 ದಂಡ ವಿಧಿಸಲಾಗಿದೆ.
ಘಟನೆ 2021ರ ಜುಲೈ 3 ರಂದು ಸಂಜೆ 5 ಗಂಟೆ ಸಮಯದಲ್ಲಿ ನಡೆದಿದೆ. ಆ ಸಮಯದಲ್ಲಿ ರಾಜ್ಯದಲ್ಲಿ ವಾರಾಂತ್ಯದ ಲಾಕ್ಡೌನ್ ಜಾರಿಯಲ್ಲಿತ್ತು ಮತ್ತು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿಗಳು ತೆರೆಯಲು ಅನುಮತಿ ಇತ್ತು. ಆದರೆ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚಿಕ್ಕಕುನ್ನಾಲ ಸರ್ಕಲ್ನಲ್ಲಿ, ಆರೋಪಿಗಳಲ್ಲಿ ಮೊದಲನೇವನಾದ ಆದೀರ್ ಅಹಮದ್ ತನ್ನ ಚಿಲ್ಲರೆ ಅಂಗಡಿಯನ್ನು ತೆರೆಯುವ ಮೂಲಕ ಲಾಕ್ಡೌನ್ ಉಲ್ಲಂಘನೆ ಮಾಡಿದ್ದಾರೆ.
ಪೊಲೀಸರು ಅಂಗಡಿ ಮುಚ್ಚಲು ಸೂಚಿಸಿದರೂ, ಆದೇಶವನ್ನು ಪಾಲಿಸದೆ ಇತರ 22 ಮಂದಿ ಜೊತೆಗೂಡಿ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನು ಎಳೆದಾಡಿ, ತಳ್ಳಿ, ಕಲ್ಲುಗಳಿಂದ ಹೊಡೆದು ಗಾಯಗೊಳಿಸಿ, ಅವರು ಕುಳಿತುಕೊಂಡಿದ್ದ ಸರ್ಕಾರಿ ಜೀಪಿನ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.