ರೇಣುಕಾಸ್ವಾಮಿ ಹತ್ಯೆ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್!
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಮತ್ತೆ ಅಗ್ನಿಪರೀಕ್ಷೆ ಶುರುವಾಗಿದೆ. ಇಂದು 64ನೇ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.
ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಕಳೆದ ವಿಚಾರಣೆಯಲ್ಲಿ ಕೆಲವು ಆರೋಪಿಗಳು ಗೈರಾಗಿದ್ದ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಐ.ಪಿ. ನಾಯ್ಕ್ ಅವರು ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದರು. ಆ ದಿನ ಚಾರ್ಜ್ ಪ್ರೇಮ್ ಸಲುವಾಗಿ ಕೋರ್ಟ್ ಎರಡೂ ಕಡೆಯ ವಾದಗಳನ್ನು ಆಲಿಸಲಿದೆ.
ಚಾರ್ಜ್ ಪ್ರೇಮ್ ಎಂದರೆ, ಆರೋಪಿಗಳ ಮೇಲೆ ಯಾವ ಸೆಕ್ಷನ್‌ಗಳಡಿ ದೋಷಾರೋಪಣೆ ಮಾಡಬೇಕೆಂಬುದನ್ನು ನ್ಯಾಯಾಧೀಶರು ನಿರ್ಧರಿಸುವ ಹಂತ. ಆ ನಂತರವೂ ಸಂಬಂಧಿತ ಸೆಕ್ಷನ್‌ಗಳ ಕುರಿತು ಕೋರ್ಟ್‌ನಲ್ಲಿ ವಾದ ಮುಂದುವರಿಯಲಿದೆ.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಜಾಮೀನು ಮೇಲ್ಮನವಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ವಿಚಾರಣೆ ವೇಳೆ ಟ್ರಯಲ್ ಪ್ರಾರಂಭದ ಅವಧಿ ಬಗ್ಗೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌ಗೆ, ಸರ್ಕಾರದ ಪರ ವಕೀಲರು ಆರು ತಿಂಗಳಲ್ಲಿ ವಿಚಾರಣೆ ಮುಗಿಸುವ ಭರವಸೆ ನೀಡಿದ್ದರು.
ಹೀಗಾಗಿ, ಒಂದು ಕಡೆ ಸೆಷನ್ಸ್ ಕೋರ್ಟ್‌ನಲ್ಲಿ ಟ್ರಯಲ್ ಪ್ರಾರಂಭದ ಚಿಂತೆಯಿದ್ದರೆ, ಮತ್ತೊಂದು ಕಡೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ತೀರ್ಪಿನ ಆತಂಕವೂ ಆರೋಪಿಗಳನ್ನು ಕಾಡುತ್ತಿದೆ.