ಸಿಲಿಂಡರ್ ಸ್ಫೋಟ: 8 ವರ್ಷದ ಬಾಲಕನ ಸಾವು – ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಣೆ
ಬೆಂಗಳೂರು: ಇಂದು ಬೆಳಗ್ಗೆ ಬೆಂಗಳೂರಿನ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದ ಘಟನೆ ಸಿಲಿಕಾನ್ ಸಿಟಿಯ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಈ ನಿಗೂಢ ಸ್ಫೋಟದಲ್ಲಿ 8 ವರ್ಷದ ಬಾಲಕ ಮುಬಾರಕ್ ದುರ್ಮರಣಕ್ಕೊಳಗಾಗಿದ್ದು, ಇನ್ನೂ 9 ಮಂದಿ ಗಾಯಗೊಂಡಿದ್ದಾರೆ.
ಘಟನೆ ನಡೆದ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಸುತ್ತಮುತ್ತಲಿನ 13 ಮನೆಗಳು ಸ್ಫೋಟದ ತೀವ್ರತೆಗೆ ಧ್ವಂಸಗೊಂಡಿವೆ. ಹಾನಿಗೊಳಗಾದ ಮನೆಗಳ ಮರುನಿರ್ಮಾಣ ಕಾರ್ಯವನ್ನು ಸರ್ಕಾರವೇ ಹೊಣೆವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸ್ಫೋಟದ ಸುದ್ದಿ ತಿಳಿದ ತಕ್ಷಣ ಸಿಎಂ ಸಿದ್ದರಾಮಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಧ್ಯಮಗಳಿಗೆ ಮಾತನಾಡಿದ ಅವರು, “ಇವತ್ತು ನಡೆದ ಘಟನೆ ಬಹಳ ಬೇಸರದ ಸಂಗತಿ. ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟ ಎನ್ನಲಾಗಿದೆ. ಘಟನೆಯಲ್ಲಿ ಮುಬಾರಕ್ ಎಂಬ ಬಾಲಕನು ಪ್ರಾಣ ಕಳೆದುಕೊಂಡಿದ್ದಾನೆ. 9 ಜನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದರು. ಸಿಎಂ ಅವರು ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.