ಬೆಂಗಳೂರಿನ ಹಲಸೂರು ಸಿಖ್ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಸಂದೇಶ
ಬೆಂಗಳೂರು: ನಗರದ ಹಲಸೂರು ಕೆರೆ ಸಮೀಪ ಇರುವ ಗುರುಸಿಂಗ್ ಸಭಾ ಸಿಖ್ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ನಾಲ್ಕು ದಿನಗಳ ಹಿಂದೆ ಬಂದ ಈ ಇ-ಮೇಲ್ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ ಗಿರಿ ಎಂಬಾತನ ಹೆಸರಿನಲ್ಲಿ ಕಳುಹಿಸಲಾದ ಸಂದೇಶದಲ್ಲಿ ನಾಲ್ಕು ಆರ್‌ಡಿಎಕ್ಸ್ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಜೊತೆಗೆ, ಗುರುದ್ವಾರದ ಶೌಚಾಲಯದಲ್ಲಿ ಬಾಂಬ್ ಇಟ್ಟಿದ್ದಾಗಿ ಉಲ್ಲೇಖಿಸಲಾಗಿತ್ತು. ಈ ಕುರಿತು ಋಷಿಪಾಲ್ ಸಿಂಗ್ ಎಂಬವರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಘಟನೆ ಬಳಿಕ ಪೊಲೀಸರು ಗುರುದ್ವಾರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಿದ್ದು, ಬಾಂಬ್ ಪತ್ತೆ ದಳ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಇ-ಮೇಲ್ ಕಳುಹಿಸಿದವರ ಪತ್ತೆಹಚ್ಚಲು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.