ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ: ರಾಹುಲ್ ಗಾಂಧಿಯ ಗಂಭೀರ ಆರೋಪ
ನವದೆಹಲಿ: ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “2023ರ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6018 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಯತ್ನಿಸಲಾಗಿದೆ. ಬೇರೆ ರಾಜ್ಯಗಳ ಫೋನ್ ನಂಬರ್ ಬಳಸಿ ಕಾಂಗ್ರೆಸ್ ಮತದಾರರನ್ನೇ ಟಾರ್ಗೆಟ್ ಮಾಡಲಾಗಿದೆ” ಎಂದು ದೂರಿದರು.
ಸೂರ್ಯಕಾಂತ್ ಎಂಬವರ ಹೆಸರು ಬಳಸಿಕೊಂಡು ಕೇವಲ 14 ನಿಮಿಷಗಳಲ್ಲಿ 12 ಮತದಾರರ ಹೆಸರುಗಳನ್ನು ತೆಗೆಸಲಾಗಿದೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದರು. ಕಾಂಗ್ರೆಸ್ ಬಲವಾಗಿರುವ ಬೂತ್‌ಗಳನ್ನೇ ಟಾರ್ಗೆಟ್ ಮಾಡಿ ಮತಗಳ್ಳತನ ನಡೆದಿದೆ ಎಂದು ಅವರು ಹೇಳಿದರು.
ಕರ್ನಾಟಕ ಸಿಐಡಿ ಕಳೆದ 18 ತಿಂಗಳಲ್ಲಿ 18 ಪತ್ರಗಳನ್ನು ಚುನಾವಣಾ ಆಯೋಗಕ್ಕೆ ಬರೆದಿದ್ದರೂ ಯಾವುದೇ ಉತ್ತರ ಬಂದಿಲ್ಲವೆಂದು ಆರೋಪಿಸಿದರು. “ಇದು ಸಾಮಾನ್ಯ ವಿಷಯವಲ್ಲ, ದೊಡ್ಡ ಮಟ್ಟದ ಅಕ್ರಮ. ಯುವಕರಿಗೆ ಚುನಾವಣೆಗಳಲ್ಲಿ ನಡೆಯುತ್ತಿರುವ ಅಕ್ರಮ ತಿಳಿಯಲು ಇದು ಮೈಲಿಗಲ್ಲಾಗಲಿದೆ” ಎಂದು ಅವರು ಅಭಿಪ್ರಾಯಪಟ್ಟರು.