ಬಿಳಿ, ಕೆಂಪು, ಗುಳ್ಳೆಗಳು: ನಾಲಿಗೆಯ ಬದಲಾವಣೆಗಳ ಅರ್ಥ ಏನು?
ಆಹಾರ ಸರಿಯಾಗಿ ಜೀರ್ಣವಾದರೆ ಮಾತ್ರ ದೇಹಕ್ಕೆ ಅಗತ್ಯ ಶಕ್ತಿ ದೊರೆಯುತ್ತದೆ. ಜೀರ್ಣಕ್ರಿಯೆ ಅಸಮತೋಲನಗೊಂಡರೆ ಆಸಿಡಿಟಿ, ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರ ಸೇರಿದಂತೆ ಅನೇಕ ತೊಂದರೆಗಳು ಎದುರಾಗುತ್ತವೆ. ಫೈಬರ್‌ಯುಕ್ತ ಆಹಾರ ಸೇವನೆ ಜೀರ್ಣಶಕ್ತಿಗೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ನಾಲಿಗೆ ನಮ್ಮ ದೇಹದ ಆಂತರಿಕ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ನಾಲಿಗೆ ಗುಲಾಬಿ ಬಣ್ಣದಲ್ಲಿದ್ದು ಸಣ್ಣ ಗಂಟುಗಳಿಂದ ಕೂಡಿರುತ್ತದೆ. ಆದರೆ ಬಣ್ಣ, ನೋಟ ಅಥವಾ ವಿನ್ಯಾಸದಲ್ಲಿ ಬದಲಾವಣೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಬಿಳಿ ಲೇಪನ ಅಥವಾ ಚುಕ್ಕೆಗಳು : ಯೀಸ್ಟ್ ಸೋಂಕು ಅಥವಾ ಲ್ಯುಕೋಪ್ಲಾಕಿಯಾ ಸೂಚನೆ. ಕ್ಯಾನ್ಸರ್‌ಗೂ ಮುನ್ನದ ಲಕ್ಷಣವಾಗಿರಬಹುದು. ತಂಬಾಕು ಸೇವನೆ, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಸಾಮಾನ್ಯ.
ಕೆಂಪಾದ ನಾಲಿಗೆ : ವಿಟಮಿನ್ ಕೊರತೆ, ಸ್ಕಾರ್ಲೆಟ್ ಜ್ವರ ಅಥವಾ ಕವಾಸಕಿ ಕಾಯಿಲೆ ಸೂಚನೆ. ರಕ್ತಪರೀಕ್ಷೆಯ ಮೂಲಕ ದೃಢಪಡಿಸಬಹುದು.
ನೋವಿನ ಅನುಭವ : ಹಲ್ಲುಗಳಿಂದ ಕಚ್ಚಿಕೊಂಡ ಪರಿಣಾಮ ಅಥವಾ ಅತಿಯಾದ ಧೂಮಪಾನ ಕಾರಣವಾಗಿರಬಹುದು. ಎರಡು ವಾರಗಳಲ್ಲಿ ಗುಣವಾಗದ ಹುಣ್ಣು ಕ್ಯಾನ್ಸರ್ ಸೂಚನೆಯಾಗಿರಬಹುದು.
ಕೂದಲಿನಂತಿರುವ ಗುಳ್ಳೆಗಳು : ಅಪಾಯಕಾರಿಯಲ್ಲದಿದ್ದರೂ ಬ್ಯಾಕ್ಟೀರಿಯಾ ನೆಲೆಸುವ ಸಾಧ್ಯತೆ. ಮಧುಮೇಹಿಗಳು, ಆ್ಯಂಟಿಬಯೋಟಿಕ್ ಅಥವಾ ಕೀಮೋಥೆರಪಿ ಪಡೆಯುತ್ತಿರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ತಜ್ಞರು ಹೇಳುವಂತೆ, ನಾಲಿಗೆಯಲ್ಲಿನ ಬದಲಾವಣೆಗಳನ್ನು ನಿರ್ಲಕ್ಷಿಸದೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.