ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು:- ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಾಹಿತಿ ಬಾನು ಮುಷ್ತಾಕ್ ಅವರ ಮೇಲೆ ನಮಗೆ ಗೌರವ ಹೆಚ್ಚಾಗಿದೆ. ಬಾನು ಮುಷ್ತಾಕ್ ಅವರ ಹಿಂದಿನ ಹೇಳಿಕೆಗೆ ನಮ್ಮ ವಿರೋಧ ಇತ್ತು. ಇಡೀ ರಾಜ್ಯದಲ್ಲಿ ಹಿಂದುತ್ವ ಪರಿಪಾಲಕರು ಯಾರೂ ಅವರ ಹೇಳಿಕೆ ಒಪ್ಪಲಿಲ್ಲ. ಇವತ್ತು ಅವರ ಭಾಷಣ ನೋಡಿ ನಮಗೆ ಸಂತೋಷ ಆಗಿದೆ ಎಂದರು.
ಮುಸ್ಲಿಂ ಹೆಣ್ಣು ಮಗಳು ಹಿಂದೂ ಹೆಣ್ಣುಮಗಳಂತೆ ಅರಿಶಿಣ ಬಣ್ಣದ ಸೀರೆಯುಟ್ಟು ಹೂ ಮುಡಿದು ದೇವಸ್ಥಾನಕ್ಕೆ ಬಂದು, ಆರತಿ ಬೆಳಗಿ, ಮಂಗಳಾರತಿ ತೆಗೆದುಕೊಂಡಿದ್ದಾರೆ. ಹಿಂದೂ ಸಂಸ್ಕೃತಿ ಪರವಾಗಿ ನಿಂತು ಅವರು ದಸರಾ ಉದ್ಘಾಟನೆ ಮಾಡಿದ್ದಾರೆ ಎಂದು ಹೇಳಿದರು. ನಮಗೆ ಏನು ಬೇಕಿತ್ತೋ? ನಮ್ಮ ನಿರೀಕ್ಷೆ ಏನು ಇತ್ತೋ ಅದನ್ನು ಅವರು ಇವತ್ತು ಮಾಡಿದ್ದಾರೆ. ಹಿಂದೂ ಸಂಸ್ಕೃತಿಗೆ ಗೌರವ ಕೊಟ್ಟು ಬಾನು ಮುಷ್ತಾಕ್ ಇವತ್ತು ನಡೆದುಕೊಂಡಿದ್ದಾರೆ. ಹೀಗಾಗಿ ಅವರ ಮೇಲೆ ನಮಗೆ ಗೌರವ ಹೆಚ್ಚಾಗಿದೆ ಎಂದು ತಿಳಿಸಿದರು.