ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ
ಸಿನಿಮಾ ಮಾಡುವುದಾಗಿ ಆಮಿಷವೊಡ್ಡಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಹೇಮಂತ್ ಅವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ರಿಯಾಲಿಟಿ ಶೋ ವಿನ್ನರ್ ಆಗಿರುವ ಈ ನಟಿ ನೀಡಿದ ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕಿರುತೆರೆಯಲ್ಲಿ ನಟಿಸುತ್ತಿರುವ ನಟಿಗೆ 2022ರಲ್ಲಿ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯವಾದ ಆರೋಪಿ ತಾನು ರಿಚ್ಚಿ ಎಂಬ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನೀವು ನಾಯಕಿಯಾಗಿ ನಟಿಸಬೇಕು ಎಂದು ನಟಿಗೆ ಹೇಳಿದ್ದಾನೆ. ಅದಕ್ಕೆ ಒಪ್ಪಿಕೊಂಡ ನಟಿಗೆ 2 ಲಕ್ಷ ರೂ. ಸಂಭಾವನೆ ನೀಡುತ್ತೇನೆಂದು ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.
ಮುಂಗಡವಾಗಿ ನನಗೆ 60 ಸಾವಿರ ರೂ. ಕೊಡಲಾಗಿತ್ತು. ಅದರಂತೆ ಚಿತ್ರೀಕರಣ ಆರಂಭವಾಗಿತ್ತು. ಆದರೆ, ಕಾರಣಾಂತರಗಳಿಂದ ಆರೋಪಿ ಸಿನಿಮಾ ಚಿತ್ರೀಕರಣವನ್ನು ಮುಂದೂಡಿದ್ದ. ಬಳಿಕವೂ ಸಿನಿಮಾದಲ್ಲಿ ನಟಿಸುತ್ತಿದ್ದೆ. ಆದರೆ, ಅಶ್ಲೀಲ ಬಟ್ಟೆ ತೊಡಬೇಕು, ಅಶ್ಲೀಲವಾಗಿ ನಟಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ, ಅಸಭ್ಯ ರೀತಿಯಲ್ಲಿ ಸ್ಪರ್ಶಿಸುತ್ತಿದ್ದರು. ಒಪ್ಪಂದದ ಅವಧಿ ಮುಗಿದಿದ್ದರಿಂದ ಸಿನಿಮಾ ಚೇಂಬರ್ ಸಮ್ಮುಖದಲ್ಲಿ ಅವಧಿ ವಿಸ್ತರಣೆ ಮಾಡಿ ಸಿನಿಮಾ ಪೂರ್ತಿಗೊಳಿಸಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಳಿಕ ಮುಂಬೈನಲ್ಲಿ ಸಿನಿಮಾ ಪ್ರಚಾರಕ್ಕೆ ಹೋಗಿದ್ದೆ. ಆಗ ಅಲ್ಲಿಯೂ ಅಸಭ್ಯವಾಗಿ ವರ್ತಿಸಿದ್ದ. ಬಳಿಕ ಬೇರೆ ಕಡೆ ಸಿನಿಮಾ ಪ್ರಚಾರಕ್ಕೆ ಒಬ್ಬಳೇ ಬರುವಂತೆ ಹೇಳುತ್ತಿದ್ದ. ಅದಕ್ಕೆ ನಿರಾಕರಿಸಿದಾಗ ನನ್ನ ಹಿಂದೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿದ್ದಾನೆ. ಇನ್ನು ರಿಚ್ಚಿ ಸಿನಿಮಾದ ಕೆಲವು ಸೆನ್ಸಾರ್ ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ನಾನು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದೆ ಎಂದು ನಟಿ ದೂರಿದ್ದಾರೆ.