ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕಮತ್ತುಆರ್ಥಿಕಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ, ಅಕ್ಟೋಬರ್ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ನೀಡಲು ಸಿಎಂಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಹತ್ವದಸಭೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಜಾತಿಗಣತಿ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಶಾಲೆಗಳಲ್ಲಿ ದಸರಾ ರಜೆ ಅಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ, ಶಿಕ್ಷಕರನ್ನು ಸಮೀಕ್ಷೆಗೆ ಸಂಪೂರ್ಣವಾಗಿ ಬಳಸಿ 12 ಕಾರ್ಯದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳುವಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯವು ಸೆಪ್ಟೆಂಬರ್ 22 ರಿಂದ ಆರಂಭಗೊಂಡಿತ್ತು. ಇದನ್ನು ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಸಮೀಕ್ಷೆಯ ಪ್ರಗತಿ ನಿರೀಕ್ಷಿಸಿದಷ್ಟು ಆಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ರಾಜ್ಯದಾದ್ಯಂತ ನಮ್ಮ ನಿರೀಕ್ಷೆಗೆ ತಕ್ಕಂತೆ ಸರ್ವೇ ಪೂರ್ಣಗೊಂಡಿಲ್ಲ. ಕೊಪ್ಪಳದಂತಹ ಕೆಲವು ಜಿಲ್ಲೆಗಳಲ್ಲಿ ಶೇ. 97ರಷ್ಟು ಪ್ರಗತಿ ಸಾಧಿಸಿದ್ದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ ಶೇ. 60ರಷ್ಟು ಮಾತ್ರ ಆಗಿದೆ. ಅಕ್ಟೋಬರ್ 7 ಕೊನೆಯ ದಿನವಾಗಿದ್ದರೂ, ಎಲ್ಲ ಜಿಲ್ಲೆಗಳಲ್ಲಿ ಸಂಪೂರ್ಣ ಸರ್ವೇ ಪೂರ್ಣವಾಗುವುದು ಅಸಾಧ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.