ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್
ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಜಾಲಿವುಡ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದೇ ನಾನು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದೋ ಅದಕ್ಕೆ ಅವಕಾಶ ನೀಡಿ ಎಂದೂ ತಿಳಿಸಿದ್ದೇನೆ. ಬಿಗ್ ಬಾಸ್ ಒಂದೇ ಅಲ್ಲ. ಎಲ್ಲಾ ಮನರಂಜನಾ ಕಾರ್ಯಕ್ರಮಗಳು ನಡೆಯಬೇಕು” ಎಂದರು.
ಜಾಲಿವುಡ್ ಸ್ಟುಡಿಯೋದವರು ಮಾಲಿನ್ಯ ನಿಯಮಗಳನ್ನು ಪಾಲಿಸಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಅದರ ಆದೇಶದಂತೆ ಈಗ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ. ಈ ವಿಚಾರಗಳನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ” ಎಂದು ಹೇಳಿದರು.
ನಟ್ಟು ಬೋಲ್ಟ್ ಟೈಟ್ ಎಂದು ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ಎಕ್ಸ್ (ಟ್ವೀಟ್) ಮಾಡಿರುವ ಬಗ್ಗೆ ಕೇಳಿದಾಗ, “ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರಾದರೂ ಮಾಡಿಕೊಳ್ಳಲಿ, ಮೇಲಿನಿಂದ ಯಾರನ್ನಾದರೂ ಕರೆದುಕೊಂಡಾದರೂ ಬಂದು ಮಾಡಿಕೊಳ್ಳಲಿ” ಎಂದು ವ್ಯಂಗ್ಯವಾಡಿದರು. “ಈ ವಿಚಾರದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪ್ರತಿದಿನ ನನ್ನನ್ನು, ನನ್ನ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ (ಕುಮಾರಸ್ವಾಮಿ) ನೆಮ್ಮದಿ, ನಿದ್ದೆ ಹಾಗೂ ಯಾವುದಕ್ಕೂ ಶಕ್ತಿ ಬರುವುದಿಲ್ಲ” ಎಂದು ಲೇವಡಿ ಮಾಡಿದರು.