ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ!
ನಮ್ಮ ದೇಹವು ಕೆಲವೊಮ್ಮೆ ಆರೋಗ್ಯದ ಬಗ್ಗೆ ಪ್ರಮುಖ ಸೂಚನೆಗಳನ್ನು ನೀಡುತ್ತದೆ. ಆದರೆ ನಾವು ಅದನ್ನು ಗಮನಿಸದೆ ನಿರ್ಲಕ್ಷಿಸುತ್ತೇವೆ. ವಿಶೇಷವಾಗಿ ರಕ್ತ ಪರಿಚಲನೆ ಸರಿಯಾಗದ ಸ್ಥಿತಿಯಲ್ಲಿ, ದೇಹ ಕೆಲವೊಂದು ಸೂಕ್ಷ್ಮ ಲಕ್ಷಣಗಳ ಮೂಲಕ ಎಚ್ಚರಿಕೆ ನೀಡುತ್ತದೆ. ಇವುಗಳಲ್ಲಿ ಪಾದಗಳಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳು ಮುಖ್ಯವಾಗಿವೆ. ಈ ಬದಲಾವಣೆಗಳನ್ನು ಪರೀಕ್ಷಿಸಿ ನೋಡುವುದು ಅನಿವಾರ್ಯವಾಗಿದೆ.
ಪಾದಗಳಲ್ಲಿ ಊತ ಮತ್ತು ಭಾರ:
ದಿನದ ಕೊನೆಗೆ ಅಥವಾ ದೀರ್ಘಕಾಲ ನಿಂತುಕೊಂಡೆ ಇದ್ದಾಗ ಪಾದಗಳು ಊದಿದಂತಾಗಿದೆಯೆ? ಇದು ಎಡಿಮಾ ಎಂಬ ಸ್ಥಿತಿಯ ಲಕ್ಷಣವಾಗಿರಬಹುದು. ಇದು ದೇಹದಲ್ಲಿ ರಕ್ತ ಮತ್ತು ದ್ರವಗಳು ಸರಿಯಾಗಿ ಹರಿಯದೆ ಪಾದಗಳಲ್ಲಿ ಸಿಲುಕುವುದರಿಂದ ಉಂಟಾಗುತ್ತದೆ. ಹೆಚ್ಚು ಬಿಗಿಯಾದ ಪಾದರಕ್ಷಕಗಳನ್ನು ಧರಿಸುವುದೂ ಕಾರಣವಾಗಬಹುದು.
ಕಾಲು ನೋವು ಅಥವಾ ಮರಗಟ್ಟುವಿಕೆ:
ಹೆಜ್ಜೆ ಹಾಕುವಾಗ ಅಥವಾ ನಿದ್ರಾ ಸಮಯದಲ್ಲಿ ಕಾಲು ನೋವು, ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಅನುಭವವಾಗಿದೆಯೆ? ಇದು ರಕ್ತನಾಳಗಳಲ್ಲಿ ರಕ್ತದ ಹರಿವಿನ ಅಡಚಣೆಯ ಕಾರಣದಿಂದ ಆಗಬಹುದು. ಈ ಸ್ಥಿತಿಗೆ ಕ್ಲಾಡಿಕೇಶನ್ ಎನ್ನಲಾಗುತ್ತದೆ. ಇದು ಪಾದಗಳಿಗೆ ಆಮ್ಲಜನಕ ಸರಿಯಾಗಿ ಹೋಗದ ಕಾರಣ ಸಂಭವಿಸುತ್ತದೆ.
ಪಾದಗಳ ಬಣ್ಣ ಬದಲಾವಣೆ:
ಪಾದಗಳು ಅಥವಾ ಕಾಲ್ಬೆರಳುಗಳು ತಣ್ಣಗಾಗುವುದು, ಅಥವಾ ಅವುಗಳ ಬಣ್ಣ ನೀಲಿ, ನೇರಳೆ ಅಥವಾ ಕೆಂಪಾಗಿ ಬದಲಾಗುವುದು ಕೂಡ ರಕ್ತ ಹರಿವಿನಲ್ಲಿ ತೊಂದರೆ ಇದ್ದರೆ ಸಂಭವಿಸಬಹುದು. ಇದರಿಂದ ಪಾದಗಳಿಗೆ ತಾಪಮಾನ ಕಡಿಮೆಯಾಗುತ್ತದೆ ಹಾಗೂ ಗಾಯಗಳು ಸುಲಭವಾಗಿ ಗುಣವಾಗುವುದಿಲ್ಲ.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಈ ಕೆಳಗಿನ ಲಕ್ಷಣಗಳು ಪದೇಪದೇ ಕಾಣಿಸಿಕೊಂಡರೆ, ತಕ್ಷಣ ವೈದ್ಯಕೀಯ ಸಲಹೆ ಪಡೆದುಕೊಳ್ಳುವುದು ಅತ್ಯಾವಶ್ಯಕ:
ಪಾದಗಳ ಸ್ಥಿರ ಊತ
ಕಾಲುಗಳಲ್ಲಿ ನಿರಂತರ ನೋವು ಅಥವಾ ಮರಗಟ್ಟುವಿಕೆ
ಬಣ್ಣ ಬದಲಾವಣೆ ಮತ್ತು ತಣ್ಣಗೆತನ
ಗಾಯಗಳು ನಿದಾನವಾಗಿ ಗುಣಮುಖವಾಗುವುದು
ರಕ್ತ ಪರಿಚಲನೆ ಸರಿಯಾಗದ ಸ್ಥಿತಿ, ಮುಂದೊಳೆದು ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು (Stroke) ಅಥವಾ ಗ್ಯಾಂಗ್ರೀನ್‌ನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಪ್ರಾರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.