ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ
ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್ 2ರಂದು ನಡೆಯಬೇಕಿದ್ದ ಆರ್‌ಎಸ್‌ಎಸ್ (RSS) ಪಥಸಂಚಲನ ಸಂಬಂಧ ಕೋರ್ಟ್ ವಿಚಾರಣೆಯನ್ನು ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಮುಂದೂಡಿದೆ.
ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವು ಅರ್ಜಿದಾರರ ಸಲ್ಲಿಸಿದ ಪಥಸಂಚಲನ ಅನುಮತಿ ಅರ್ಜಿಯನ್ನು ಪರಿಶೀಲಿಸಿ, ಮತ್ತೊಂದು ಶಾಂತಿ ಸಭೆ ನಡೆಸಲು ಸೂಚಿಸಿದೆ. ಈ ಶಾಂತಿ ಸಭೆ ನವೆಂಬರ್ 5ರಂದು ಮಧ್ಯಾಹ್ನ 3 ಗಂಟೆಗೆ, ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಆಯೋಜಿಸಲು ಸೂಚಿಸಲಾಗಿದ್ದು, ವಿಚಾರಣೆ ನವೆಂಬರ್ 7ಕ್ಕೆ ಮುಂದೂಡಲಾಗಿದೆ.
ಈ ನಿರ್ಧಾರದಿಂದ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್‌ಎಸ್‌ಎಸ್ಗೆ ತಾತ್ಕಾಲಿಕ ಹಿನ್ನಡೆ ಎದುರಾಗಿದೆ. ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರು ಸರ್ಕಾರ ಮತ್ತು ಅರ್ಜಿದಾರರಿಗೆ ಶಾಂತಿ ಸಭೆಯಲ್ಲಿ, ಇಂತಹ ಪ್ರಕರಣಗಳಲ್ಲಿ ಪರಿಹಾರ ಹೇಗಿರಬೇಕೆಂಬುದಕ್ಕೆ ಮಾರ್ಗಸೂಚಿ ನೀಡುವಂತೆ ಸೂಚಿಸಿದ್ದಾರೆ.
ಎರಡೂ ಕಡೆಯಿಂದ ವಾದ ಪ್ರತಿವಾದ ಆಲಿಸಿದ ಕೋರ್ಟ್, ಅಂತಿಮವಾಗಿ ನವೆಂಬರ್ 5ರಂದು ಮತ್ತೊಂದು ಶಾಂತಿ ನಡೆಸಲು ಸೂಚಿಸಿ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ಇದರೊಂದಿಗೆ ಇದೇ ನವೆಂಬರ್ 2ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಬ್ರೇಕ್ ಬಿದ್ದಿದ್ದು, ನವೆಂಬರ್ 5ರ ಶಾಂತಿ ಸಭೆ ಆಧರಿಸಿ ಕೋರ್ಟ್ ತನ್ನ ತೀರ್ಪು ನೀಡಲಿದೆ.






