ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ
ಸ್ಯಾಂಡಲ್‌ವುಡ್‌ನ ಖ್ಯಾತ ನಟ ಹಾಗೂ ‘ಕೆಜಿಎಫ್ ಚಾಚಾ’ ಎಂದೇ ಜನಪ್ರಿಯರಾದ ಹರೀಶ್ ರಾಯ್ (57) ಇಂದು ನಿಧನರಾಗಿದ್ದಾರೆ. ಅವರು ಕೆಲಕಾಲದಿಂದ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಹರೀಶ್ ರಾಯ್ ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದರು. ಶಿವರಾಜ್‌ಕುಮಾರ್ ಅಭಿನಯದ ‘ಓಂ’ ಚಿತ್ರದಲ್ಲಿನ ‘ರಾಯ್’ ಪಾತ್ರದ ಮೂಲಕ ಖ್ಯಾತಿ ಪಡೆದ ಇವರು, ಬಳಿಕ ಹಲವು ಚಿತ್ರಗಳಲ್ಲಿ ಖಳನಟ ಹಾಗೂ ಪೋಷಕನಟನಾಗಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು.
‘ಬೆಂಗಳೂರು ಅಂಡರ್ ವರ್ಲ್ಡ್’, ‘ಸಂಜು ವೆಡ್ಸ್ ಗೀತಾ’, ‘ಸ್ವಯಂವರ’, ‘ಭೂಗತ’, ‘ನನ್ನ ಕನಸಿನ ಹೂವೆ’, ‘ನಲ್ಲ’, ‘ಜಾಫರ್ ಅಲಿಯಾಸ್ ಮುರ್ಗಿ ಜಾಫರ್’, ‘ಜೋಡಿ ಹಕ್ಕಿ’, ‘ತಾಯವ್ವ’, ‘ಓಂ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು.
ಹರೀಶ್ ರಾಯ್ ಅತ್ಯಂತ ಜನಪ್ರಿಯರಾಗಿದ್ದ ‘ಕೆಜಿಎಫ್ ಚಾಪ್ಟರ್ 1’ ಮತ್ತು ‘ಕೆಜಿಎಫ್ ಚಾಪ್ಟರ್ 2’ ಚಿತ್ರಗಳಲ್ಲಿ ‘ಕೆಜಿಎಫ್ ಚಾಚಾ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ನಿಧನದಿಂದ ಕನ್ನಡ ಚಿತ್ರರಂಗದ ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳು ಆಘಾತ ವ್ಯಕ್ತಪಡಿಸಿದ್ದಾರೆ.






