ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್ ಗರಂ
ಬೆಂಗಳೂರು, ನವೆಂಬರ್ 09: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾದ ರಾಜಾತಿಥ್ಯ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, “ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ನಾನು ಎಡಿಜಿಪಿ ದಯಾನಂದ್ ಅವರ ಜೊತೆ ಮಾತನಾಡಿದ್ದೇನೆ,” ಎಂದು ತಿಳಿಸಿದ್ದಾರೆ.
“ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗುವುದು. ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ದಯಾನಂದ್ ಅವರಿಗೆ ಸೂಚಿಸಿದ್ದೇನೆ. ಪೊಲೀಸ್ ವರದಿ ಸಮಾಧಾನಕಾರಿಯಾಗದಿದ್ದರೆ ಸಮಿತಿ ರಚಿಸಿ ತನಿಖೆ ನಡೆಸಲಾಗುತ್ತದೆ,” ಎಂದು ಸಚಿವರು ತಿಳಿಸಿದ್ದಾರೆ.
ಇದಲ್ಲದೆ, “ಉಗ್ರರಾಗಲಿ ಯಾರೇ ಆಗಲಿ, ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಫೋನ್ ನೀಡುವಂತಿಲ್ಲ. ಹೀಗಿರುವಾಗ ಪದೇಪದೇ ಇಂತಹ ಘಟನೆಗಳು ಏಕೆ ನಡೆಯುತ್ತಿವೆ?” ಎಂದು ಪ್ರಶ್ನಿಸಿದ್ದಾರೆ.






