ಡಿ ಗ್ಯಾಂಗ್ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಈಗಾಗಲೇ ಚಾರ್ಜ್ ಫ್ರೇಮ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕೋರ್ಟ್ ಆರೋಪಗಳ ಪಟ್ಟಿ ಓದಿ ಕೇಳಿಸಿದಾಗ, ಆರೋಪಿಗಳು “ಸುಳ್ಳು” ಎಂದು ಸ್ಪಷ್ಟನೆ ನೀಡಿದ್ದರು.
ಈ ಹಂತದ ನಂತರ ವಿಚಾರಣೆಯನ್ನು ನವಂಬರ್ 10 (ಇಂದು)ಕ್ಕೆ ಮುಂದೂಡಲಾಗಿತ್ತು. ಇಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಕಳೆದ ವಿಚಾರಣೆಯಲ್ಲಿ ಕೋರ್ಟ್ ಆರೋಪಿಗಳ ವಿರುದ್ಧದ ಆರೋಪ ಪತ್ರ ಆಧರಿಸಿ ಚಾರ್ಜ್ ಫ್ರೇಮ್ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಇದೀಗ ಮುಂದಿನ ಹಂತವಾಗಿ ವಿಚಾರಣೆ ಪ್ರಾರಂಭಿಸಲು ದಿನಾಂಕ ಘೋಷಣೆಗೆ ನಿರೀಕ್ಷೆ ಇದೆ.
ಎಲ್ಲಾ ಆರೋಪಿಗಳಿಗೆ ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ನಟ ದರ್ಶನ್ ಸೇರಿದಂತೆ ಆರು ಮಂದಿ ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾಲ್ ಮೂಲಕ ಹಾಜರಾಗಲಿದ್ದಾರೆ. ಉಳಿದ ಆರೋಪಿಗಳು ನೇರವಾಗಿ ಕೋರ್ಟ್‌ಗೆ ಹಾಜರಾಗಲಿದ್ದಾರೆ.
ಈ ಪ್ರಕರಣದ ವಿಚಾರಣೆ ಬೆಂಗಳೂರು 64ನೇ ಎಸಿಸಿಹೆಚ್ (CCH-64) ಕೋರ್ಟ್‌ನಲ್ಲಿ ಬೆಳಿಗ್ಗೆ 11 ಗಂಟೆಯ ನಂತರ ನಡೆಯಲಿದ್ದು, ನ್ಯಾಯಾಲಯ ಇಂದು ಟ್ರಯಲ್ ಆರಂಭದ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳ ವಿರುದ್ಧ ಪೊಲೀಸರ ತನಿಖೆ ಪೂರ್ಣಗೊಂಡಿದ್ದು, ಇದೀಗ ನ್ಯಾಯಾಂಗ ಪ್ರಕ್ರಿಯೆ ಪ್ರಮುಖ ಹಂತಕ್ಕೆ ಪ್ರವೇಶಿಸಿದೆ.






