ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಉಪೇಂದ್ರ ದಂಪತಿಯ ಮೊಬೈಲ್ ಹ್ಯಾಕ್ ಪ್ರಕರಣದಲ್ಲಿ ಬಿಹಾರ ಮೂಲದ ಹ್ಯಾಕರ್ ವಿಕಾಸ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಉಪೇಂದ್ರ ಅವರ ಮೊಬೈಲ್ ಸಂಖ್ಯೆಯಿಂದ ಸ್ನೇಹಿತರು, ಸಂಬಂಧಿಕರು ಹಾಗೂ ಅಭಿಮಾನಿಗಳಿಗೆ “ಅರ್ಜೆಂಟ್ ಹಣ ಬೇಕು, ಈ ಖಾತೆಗೆ ಕಳುಹಿಸಿ” ಎಂಬ ಸಂದೇಶಗಳು ಹೋಗುತ್ತಿದ್ದವು.
ಪ್ರಿಯಾಂಕಾ ಅವರ ಸಂಖ್ಯೆಯಿಂದಲೂ ಸಮಾನ ರೀತಿಯ ಮೆಸೇಜ್‌ಗಳು ಕಳುಹಿಸಲ್ಪಟ್ಟವು. ಈ ಸಂದೇಶಗಳನ್ನು ಕಳುಹಿಸುತ್ತಿದ್ದವರು ದಂಪತಿಯೇ ಅಲ್ಲ, ಬದಲಿಗೆ ಹ್ಯಾಕರ್‌ಗಳು ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಿದ್ದರು.
ಈ ಬಗ್ಗೆ ಮಾಹಿತಿ ಬಂದ ತಕ್ಷಣ ಉಪೇಂದ್ರ ದಂಪತಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ವೀಡಿಯೊ ಬಿಡುಗಡೆ ಮಾಡಿ “ನಮ್ಮ ಹೆಸರಿನಲ್ಲಿ ಯಾರಿಗೂ ಮೆಸೇಜ್ ಕಳುಹಿಸಿ ಹಣ ಕೇಳಲಾಗುತ್ತಿದೆ. ದಯವಿಟ್ಟು ಯಾರೂ ಹಣ ವರ್ಗಾಯಿಸಬೇಡಿ. ಇದು ಹ್ಯಾಕ್ ಪ್ರಕರಣವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು.
ದೂರು ದಾಖಲಿಸಿಕೊಂಡ ಸದಾಶಿವನಗರ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಸೈಬರ್ ತಜ್ಞರ ಸಹಾಯದಿಂದ ತಾಂತ್ರಿಕ ತನಿಖೆ ನಡೆಸಿದಾಗ ಹ್ಯಾಕಿಂಗ್ ಹಿಂದೆ ಬಿಹಾರ ಮೂಲದ ಆರೋಪಿಗಳಿರುವುದಾಗಿ ಪತ್ತೆ ಹೋಯ್ತು. ಈ ತಂಡವು ಸಿಮ್ ಕಾರ್ಡ್ ಕ್ಲೋನಿಂಗ್ ಮತ್ತು ಒಟಿಪಿ ಹ್ಯಾಕಿಂಗ್ ತಂತ್ರಗಳನ್ನು ಬಳಸಿಕೊಂಡು ದಂಪತಿಯ ಫೋನ್ ಸಂಖ್ಯೆಗಳ ಮೇಲೆ ನಿಯಂತ್ರಣ ಸಾಧಿಸಿದ್ದರು.
ತನಿಖೆ ತೀವ್ರಗೊಳಿಸಿ ವಿಶೇಷ ತಂಡ ರಚಿಸಿದ ಪೊಲೀಸರು ಬಿಹಾರಕ್ಕೆ ಕಳುಹಿಸಿದ್ದರು. ಸ್ಥಳೀಯ ಪೊಲೀಸ್ ಸಹಕಾರದೊಂದಿಗೆ ನಡೆಸಿದ ದಾಳಿಯಲ್ಲಿ ಮುಖ್ಯ ಆರೋಪಿ ವಿಕಾಸ್ ಕುಮಾರ್ ಬಂಧನಗೊಂಡು, ಆತನ ಬಳಿ ಹಲವು ಸಿಮ್ ಕಾರ್ಡ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಹ್ಯಾಕಿಂಗ್ ಉಪಕರಣಗಳು ವಶಪಡಿಸಲಾಗಿವೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ವಿಕಾಸ್ ಕುಮಾರ್ ಮತ್ತು ಆತನ ತಂಡ ದೇಶಾದ್ಯಂತ ಹಲವು ಪ್ರಮುಖ ವ್ಯಕ್ತಿಗಳ ಫೋನ್ ಸಂಖ್ಯೆಗಳು ಹ್ಯಾಕ್ ಮಾಡಿ, ಅವರ ಸಂಪರ್ಕ ಪಟ್ಟಿಯವರಿಂದ ಹಣ ವಸೂಲಿ ಮಾಡುತ್ತಿದ್ದರು.






