ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್ ಗೆ ಡಿಕ್ಕಿ: 42 ಭಾರತೀಯರು ಸಾವು
ರಿಯಾದ್: ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆಯುವ ಮೂಲಕ ಸಂಭವಿಸಿದ ಭೀಕರ ದುರಂತದಲ್ಲಿ 46ಕ್ಕೂ ಹೆಚ್ಚು ಭಾರತೀಯರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸೌದಿ ಅರೇಬಿಯಾದ ಮುಫ್ರಿಹತ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ, ಭಾರತೀಯ ಕಾಲಮಾನ ಬೆಳಿಗ್ಗೆ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಪ್ರಾಥಮಿಕ ವರದಿಗಳ ಪ್ರಕಾರ, ಬಸ್‌ಗೆ ತೀವ್ರವಾಗಿ ಬೆಂಕಿ ತಗುಲಿದ್ದು, 40ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಸಾಧ್ಯತೆ ಉಂಟಾಗಿದೆ. ಮೃತರಲ್ಲಿ ಬಹುತೇಕರು ತೆಲಂಗಾಣದ ಹೈದರಾಬಾದ್ ಮೂಲದವರು ಎನ್ನಲಾಗಿದೆ.
ಘಟನೆಯ ಬಗ್ಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿ, ಮೃತರು ಹಾಗೂ ಬದುಕಿದ್ದ ಪ್ರಯಾಣಿಕರ ಸಂಪೂರ್ಣ ವಿವರಗಳನ್ನು ತಕ್ಷಣ ಸಂಗ್ರಹಿಸಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ (CS) ಹಾಗೂ ಪೊಲೀಸ್ ಮಹಾನಿರ್ದೇಶಕರು (DGP) ಅವರಿಗೆ ಸೂಚಿಸಿದ್ದಾರೆ.
ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರಂಭಿಕ ಮಾಹಿತಿಯ ಪ್ರಕಾರ, ದುರಂತ ಸಂಭವಿಸುವ ವೇಳೆಗೆ ಸುಮಾರು 11 ಮಕ್ಕಳು ಮತ್ತು 20 ಮಹಿಳೆಯರು ಬಸ್‌ನಲ್ಲಿದ್ದರು. ಅಪಘಾತಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸೌದಿ ಅಧಿಕಾರಿಗಳಿಂದ ಹಾಗೂ ರಾಯಭಾರ ಕಚೇರಿಯಿಂದ ನಿರೀಕ್ಷಿಸಲಾಗಿದೆ.






