Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼಗೆ ಬಿತ್ತು ಬೀಗ!
ಬೆಂಗಳೂರು: ಕೋಟಿ ಕೋಟಿ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಬಿಎ ಪಶ್ಚಿಮ ನಗರ ಪಾಲಿಕೆ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಮತ್ತೊಮ್ಮೆ ಬೀಗ ಜಡಿದಿದ್ದಾರೆ. 30.81 ಕೋಟಿ ಪ್ರಾಪರ್ಟಿ ಟ್ಯಾಕ್ಸ್ ಅನ್ನು ಜಿಬಿಎಗೆ ಪಾವತಿ ಮಾಡಬೇಕಿದೆ. ಈ ಹಿನ್ನೆಲೆ ಬೆಳಗ್ಗೆಯಿಂದಲೇ ನೂರಾರು ಜನ ನೌಕರರು ರೋಡ್‌ನಲ್ಲಿ ನಿಂತು ಕಾಯುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಮಾಲ್ ಒಳಪಡುತ್ತದೆ. ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಸೀಜ್ ಮಾಡಿರ್ತಾರೆ. ಹಲವು ಬಾರಿ ನೋಟಿಸ್ ಕೊಟ್ಟಿರ್ತಾರೆ. ಮಂತ್ರಿ ಮಾಲ್‌ನವರು ನಷ್ಟದಲ್ಲಿ ಇರಲಿಕ್ಕಿಲ್ಲ. ನಿಯಮದ ಪ್ರಕಾರ ತೆರಿಗೆ ಪಾವತಿ ಮಾಡ್ಬೇಕಿತ್ತು. ಟ್ಯಾಕ್ಸ್ ಕಟ್ಟದ ಕಾರಣ ಸೀಜ್ ಮಾಡಿರ್ತಾರೆ ಎಂದು ತಿಳಿಸಿದರು.






