2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ
ಬೆಂಗಳೂರು: 2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ವ್ಯಾಪ್ತಿಯ 4 ಜಿಲ್ಲೆಗಳ 2ನೇ ಬೆಳೆಗೆ ನೀರು ಹರಿಸಲು ಸಾಧ್ಯವಾಗದಿದ್ದರೆ ಪ್ರತಿ ಎಕರೆಗೆ 50,000 ರೂ.ಪರಿಹಾರ ನೀಡಬೇಕು. ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರಗಳನ್ನ ತೆರೆಯ ಬೇಕೆಂದು ರೈತರ ಜತೆ ಹೋರಾಟ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಅತಿವೃಷ್ಟಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇನ್ನು ಸಂಕಷ್ಟದಲ್ಲಿರುವ ರೈತರ ಎರಡನೇ ಬೆಳೆಗೂ ನೀರು ಅಂದ್ರೆ ಹೇಗೆ.? ರೈತರ ಸಮಸ್ಯೆಗಳಿಗೆ ಈ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದೆ. ಭತ್ತದ ದರವು ಕುಸಿದಿದೆ. ಸರ್ಕಾರ ಈವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಈ ನಾಲ್ಕು ಜಿಲ್ಲೆಗಳ 10 ಲಕ್ಷ ಎಕರೆ ಜಮೀನು ಬದುಕೇ ತುಂಗಭದ್ರಾ ಜಲಾಶಯದ ಮೇಲೆ ನಿಂತಿದೆ. ಜಲಾಶಯದ ಕ್ರಸ್ಟ್ ಕಿತ್ತು ಹೋಗಿದ್ದರಿಂದ ಸಾವಿರಾರು ಕ್ಯೂಸೆಕ್ ನೀರು ಸಮುದ್ರ ಪಾಲಾಗಿದೆ. ಸರ್ಕಾರ ಆಂಧ್ರ, ತೆಲಂಗಾಣದ ಸಿಎಂಗಳ ಜತೆ ಸರ್ಕಾರ ಚರ್ಚೆ ಮಾಡಲಿ. ನಾವು ಕುಮಾರಣ್ಣ ಅವರ ಮೂಲಕ ಆಂಧ್ರದ ಸಿಎಂಗೆ ಒಪ್ಪಿಸ್ತೇವೆ ಎಂದು ಹೇಳಿದರು.






