ಉತ್ತರ ಒಳನಾಡಿನ ಹಲವೆಡೆ ಗುಡುಗು-ಮಿಂಚಿನೊಂದಿಗೆ ಮಳೆ: ಹವಾಮಾನ ಇಲಾಖೆ
ಬೆಂಗಳೂರು: ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಚಳಿ ಮತ್ತು ಒಣ ಹವಾಮಾನ ಮುಂದುವರಿದಿದೆ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆ ಅಥವಾ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆಯಿದೆ. ರಾಯಚೂರು, ಯಾದಗಿರಿ, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ನಿರೀಕ್ಷೆ ಹವಾಮಾನ ಇಲಾಖೆ ತಿಳಿಸಿದೆ.
ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಹ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಬೆಳಗ್ಗಿನ ವೇಳೆ ಮೋಡ ಕವಿದ ವಾತಾವರಣ ಕಂಡುಬರುವುದಾಗಿ, ಗರಿಷ್ಠ ತಾಪಮಾನ 28°C ಹಾಗೂ ಕನಿಷ್ಠ ತಾಪಮಾನ 19°C ಇರಲಿರುವುದಾಗಿ ತಿಳಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಬೀದರ್‌ನಲ್ಲಿ ಇತ್ತೀಚೆಗೆ ರಾಜ್ಯದಲ್ಲೇ ಕನಿಷ್ಠ 10°C ತಾಪಮಾನ ದಾಖಲಾಗಿತ್ತು.
ರಾಜ್ಯದ ಕೆಲವು ಭಾಗಗಳಲ್ಲಿ ತಾಪಮಾನದಲ್ಲಿ ಏರುಪೇರಾಗಿದ್ದು, ಕರಾವಳಿ ಮತ್ತು ಉತ್ತರ ಪ್ರದೇಶಗಳಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್ ವ್ಯತ್ಯಾಸ ಕಂಡುಬಂದಿದೆ. ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಹೆಚ್ಚಿನ ಬದಲಾವಣೆ ಗಮನಿಸಲಿಲ್ಲ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಮಾಹಿತಿ ಪ್ರಕಾರ, ನವೆಂಬರ್ 1ರಿಂದ 17ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, 26 ಜಿಲ್ಲೆಗಳು ಭಾರಿ ಕೊರತೆ ಹಾಗೂ ಮೂರು ಜಿಲ್ಲೆಗಳು ಸಾಮಾನ್ಯ ಕೊರತೆ ದಾಖಲಿಸಿವೆ. ಕೇವಲ ಎರಡು ಜಿಲ್ಲೆಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಸುರಿದಿದ್ದು, ಕಲಬುರಗಿ ಮತ್ತು ಯಾದಗಿರಿಯಲ್ಲಿಯೇ ಅತಿರಿಕ್ತ ಮಳೆಯಾಗಿದೆ.






