ನಮ್ಮದು ಸರ್ವ ಧರ್ಮ, ಸರ್ವ ಜಾತಿಯವರನ್ನೂ ಒಳಗೊಳ್ಳುವ ಸರ್ಕಾರ: ಸಿಎಂ ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ: ಖಜಾನೆ ಖಾಲಿ ಎನ್ನುವ ಬಿಜೆಪಿ ಸುಳ್ಳಿನ ಆರೋಪಕ್ಕೆ ಒಂದು ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಉದ್ಘಾಟನೆಯಾದ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯಿಂದಾಗಿ ಇಡೀ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಆಗಲಿದೆ ಎಂದರು. ಶಿಡ್ಲಘಟ್ಟ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿರುವುದು ನಮ್ಮ ಸರ್ಕಾರದ ಅಭಿವೃದ್ಧಿ ಪರ್ವದ ವೇಗವನ್ನು ತೋರಿಸುತ್ತಿದೆ.
ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಗ್ಯಾರಂಟಿ ಕಾರ್ಯಕ್ರಮಗಳಿಗೆ ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಹಣ ಇದುವರೆಗೂ ತೆಗೆದಿಟ್ಟಿರುವುದು ಮಾತ್ರವಲ್ಲದೆ ಇಷ್ಟೇ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನೂ ನಾವು ನಡೆಸುತ್ತಿದ್ದೇವೆ. ಇದಕ್ಕೆ ಇಂದು ಇಲ್ಲಿ ಉದ್ಘಾಟನೆಗೊಂಡ ಅಭಿವೃದ್ಧಿಯೂ ಸೇರಿದೆ ಎಂದರು.
ಸರ್ಕಾರದ ಬಳಿ ಹಣ ಇಲ್ಲ, ಖಜಾನೆ ಖಾಲಿ ಆಗಿದೆ ಎನ್ನುವ ಬಿಜೆಪಿಯ ಸುಳ್ಳು ಆರೋಪಗಳಿಗೆ ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ ಕೊಟ್ಟಿದೆ. ರಾಜ್ಯದ ಪ್ರತೀ ಕುಟುಂಬಗಳಿಗೂ ಪ್ರತೀ ತಿಂಗಳು ಸರ್ಕಾರದ ಹಣ ಮತ್ತು ಕಾರ್ಯಕ್ರಮಗಳು ತಲುಪುತ್ತಿವೆ ಎಂದರು.
ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಯಾವ ಗ್ಯಾರಂಟಿ ಯೋಜನೆಗಳೂ ನಿಲ್ಲುವುದಿಲ್ಲ. ಜೊತೆಗೆ ಸಣ್ಣ ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಅಭಿವೃದ್ಧಿ ನಡೆಸುತ್ತಿದ್ದೇವೆ ಎನ್ನುವುದನ್ನು ಅಂಕಿ ಅಂಶಗಳ ಸಮೇತ ವಿವರಿಸಿದರು.






