ಇಂದು ಮುರುಘಾ ಮಠದ ಶರಣರ ವಿರುದ್ಧದ ಪೋಕ್ಸೋ ಕೇಸ್ ತೀರ್ಪು !
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ದಾಖಲಾದ ಪಾಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ಸ್ವಾಮೀಜಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ಕಾರಣ ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಆಶ್ರಯ ಪಡೆದಿದ್ದ ಮುರುಘಾಶ್ರೀ, ಕೋರ್ಟ್ ತೀರ್ಪು ಹಿನ್ನೆಲೆ ದಾವಣಗೆರೆಯಿಂದ ಚಿತ್ರದುರ್ಗದತ್ತ ತೆರಳಿದರು. ಮುರುಘಾಶ್ರೀಗಳ ಜೊತೆಗೆ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಕೂಡ ಇದ್ದರು.
ಶರಣರ ವಿರುದ್ಧದ ಎರಡು ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಸಂಬಂಧ ಸುದೀರ್ಘ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ಸಂತ್ರಸ್ತೆಯ ಪರ ಅಂತಿಮ ವಾದ ಮಂಡಿಸಲಾಗಿದ್ದು, ವಾದ ಆಲಿಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ನವೆಂಬರ್ 26ಕ್ಕೆ ಪ್ರಕರಣದ ಅಂತಿಮ ತೀರ್ಪನ್ನು ಪ್ರಕಟಿಸುವುದಾಗಿ ತಿಳಿಸಿದ್ದರು. ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ.






